Monday, February 27, 2012

ಪಲಾಯನ


ಪಲಾಯನ

ಅಂದು ಗುರುವಾರ. ಡಿಸಂಬರ್ ತಿಂಗಳು, ಸಂಜೆಯಾಗಿತ್ತು. ಕ್ಯಾಲಿಫೋರ್ನಿಯಾದಲ್ಲಿ ಚಳಿಗಾಲ ಬಂದಿತ್ತು. ಆ ವರ್ಷ ಚಳಿ ಸ್ವಲ್ಪ ಅತಿಯಾಗಿಯೇ ಇದ್ದು, ಒಂದು ವಾರದಿಂದ ಮಳೆಯೂ ಒಂದೇ ಸಮನೆ ಬರುತ್ತಲೇಯಿತ್ತು.


ಸ್ಯಾನ್ ಫ್ರಾನ್ಸಿಸ್ಕೋ ಬೇ-ಏರಿಯಾದಲ್ಲಿ ಹರಡಿರುವ ನೂರಾರು "ಟೆಕ್" ಕಂಪನಿಗಳೊಂದರಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ದಿವಾಕರ ಅಂದು ಕೆಲಸದಿಂದ ಬೇಗನೇ ಬಂದಿದ್ದ. ದಿವಾಕರನ ಹೆಂಡತಿ ಉಷಾಳಿಗೂ, ದಿವಾಕರನಿಗೂ ಅಂದು ಯಾವುದೋ ಒಂದು ಸಣ್ಣ ವಿಚಾರ ಕುರಿತು ದೊಡ್ಡ ಜಗಳವಾಗಿತ್ತು. ಇತ್ತೀಚೆಗೆ, ವಿವಾಹದ ಏಳು ವರ್ಷಗಳ ನಂತರ ಅವರಿಬ್ಬರ ನಡುವಿನ ಸಂಬಂಧ ಸ್ವಲ್ಪ ಸಡಿಲವಾದಂತಾಗಿ ಇಂತಹ ಜಗಳಗಳು ಸಾಮಾನ್ಯವೆನಿಸಿಬಿಟ್ಟಿತ್ತು. ಒಂದೆರಡು ಬಾರಿ ಬೇರೆಯಾಗುವ ಮಾತೂ ನಡೆದಿತ್ತು.


ಮನೆಯಲ್ಲಿ ಆವರಿಸಿದ್ದ ಇಕ್ಕಟ್ಟಿನ ವಾತಾವರಣದಿಂದ ತಪ್ಪಿಸಿಕೊಳ್ಳಲೆಂದು ದಿವಾಕರ ’ನಾನು ಹೊಸ ಶೂಸ್ ಕೊಳ್ಳಬೇಕು’ ಎಂದು ನೆಪ ಮಾಡಿ, ನೆಪವೇನು, ಅವನ ಶೂಸ್ ನಿಜವಾಗಿ ಹಳೆಯದಾಗಿದ್ದವು. ಹೇಗಿದ್ದರೂ ಬದಲಾಯಿಸಲೇಬೇಕೆಂದು ತೀರ್ಮಾನಿಸಿ ಮನೆಯಿಂದ ಹೊರಬಿದ್ದ.


ದಿವಾಕರನ ಮನೆ ಮಿಲ್ಪೀಟಸ್ ನಗರದಲ್ಲಿತ್ತು. ಮಿಲ್ಪೀಟಸ್ ಸ್ಯಾನ್ ಫ್ರಾನ್ಸಿಸ್ಕೋದಿಂದ ಸುಮಾರು ೪೦ ಮೈಲಿ ದೂರದಲ್ಲಿ ದಕ್ಷಿಣ ದಿಕ್ಕಿನಲ್ಲಿ, ದೊಡ್ಡ ನಗರಗಳಾದ ಸ್ಯಾನ್ ಹೋಸೆ ಮತ್ತು ಫ್ರೀಮಾಂಟ್ ಎರಡರ ನಡುವೆ ಸಿಲುಕಿರುವ ಪುಟ್ಟ ಊರು. ಮಿಲ್ಪೀಟಸ್ ನಗರದಲ್ಲಿ ಅತೀ ಪ್ರಸಿದ್ಧವಾಗಿರುವುದು ಅಲ್ಲಿಯ ’ಗ್ರೇಟ್ ಮಾಲ್’. ಹಿಂದೊಮ್ಮೆ ಫೋರ್ಡ್ ಕಾರುಗಳನ್ನು ಮಾಡುವ ಫ್ಯಾಕ್ಟರಿಯಾಗಿದ್ದು ಇಂದು ವಿಶಾಲವಾದ ಶಾಪಿಂಗ್ ಮಾಲ್ ಅವತಾರ ತಾಳಿದೆ. ಗ್ರೇಟ್ ಮಾಲ್ ದಿವಾಕರನ ಮನೆಯಿಂದ ಕೇವಲ ಮೂರು ಮೈಲಿ ದೂರದಲ್ಲಿತ್ತು. ಹೊಸ ಶೂಸ್ ಖರೀದಿಸಲು ಅದಕ್ಕಿಂತ ಒಳ್ಳೆಯ ಸ್ಥಳವಿಲ್ಲವೆಂದು ನಿರ್ಧರಿಸಿ ದಿವಾಕರ ತನ್ನ ಹತ್ತು ವರ್ಷ ಹಳೆಯ ನೀಸಾನ್ ಕಾರನ್ನು ಗ್ರೇಟ್ ಮಾಲ್ ಕಡೆಗೆ ತಿರುಗಿಸಿದ.


ಗುರುವಾರ, ಕೆಲಸದ ದಿನವಾದರೂ, ಕ್ರಿಸ್ಮಸ್ ಹತ್ತಿರವಾಗಿದ್ದರಿಂದ ವಿಶಾಲವಾದ ಪಾರ್ಕಿಂಗ್ ಲಾಟ್‍ನಲ್ಲಿ ಬಹಳಷ್ಟು ಕಾರುಗಳು ನಿಂತಿದ್ದವು. ತನ್ನ ಕಾರನ್ನೂ ನಿಲ್ಲಿಸಿ, ದಿವಾಕರ ಮಾಲ್ ಒಳಕ್ಕೆ ನಡೆದ. ಬಾಗಿಲಲ್ಲೇ ಹಾಕಿದ್ದ ನಕ್ಷೆಯನ್ನು ನೋಡಿ, ’ರೀಬಾಕ್ ಅಥವ ನೈಕಿ ಎರಡರಲ್ಲೊಂದು’ ಎಂದು ನಿರ್ಧರಿಸಿ, ನೈಕಿ ಔಟ್ಲೆಟ್ ಕಡೆ ತಿರುಗಿದ.


***


ಅಬ್ದುಲ್ಲ, ಮುಸ್ತಾಫ ಮತ್ತು ರಫಿ ಮೂವರು ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ತಾಲಿಬಾನ್ ದೆಸೆಯಿಂದ ಆತಂಕವಾದದ ತರಬೇತಿ ಪಡೆದು, ನಕಲಿ ಕನೇಡಿಯನ್ ಪಾಸ್ಪೋರ್ಟ್‍ಗಳನ್ನು ಉಪಯೋಗಿಸಿ ಪಾಕಿಸ್ತಾನದಿಂದ ನೇಪಾಳ, ಅಲ್ಲಿಂದ ಸ್ಪೇನ್ ಮೂಲಕ ಮೆಕ್ಸಿಕೋ ದೇಶದಲ್ಲಿರುವ ಮೆಕ್ಸಿಕೋ ಸಿಟಿಯನ್ನು ಕಳೆದ ಭಾನುವಾರ ಬಂದು ತಲುಪಿದ್ದರು. ಅಲ್ಲಿನಿಂದ ಒಂದೇ ಸಮನೆ ಕಾರ್ ಚಲಿಸುತ್ತ ಬಂದು ತಿಹುವಾನ ಬಾರ್ಡರ್ ಕ್ರಾಸಿಂಗ್‍ನಲ್ಲಿ ಮೆಕ್ಸಿಕೋ ದೇಶದಿಂದ ಅಮೇರಿಕಾಗೆ ದಾಟಿದ್ದರು.


ಮೆಕ್ಸಿಕೋದಿಂದ ಅಮೇರಿಕಾಗೆ ದಾಟಿದಾಗ ಮೊದಲು ಸಿಗುವುದು ಸ್ಯಾನ್ ಡಿಯಾಗೋ ನಗರ. ಅಲ್ಲಿನಿಂದ ಇಂಟರ್ಸ್ಟೇಟ್ ೫ ಫ್ರೀವೇ ಹಿಡಿದು ಸುಮಾರು ೫೦೦ ಮೈಲಿ ಡ್ರೈವ್ ಮಾಡುತ್ತ ಮಿಲ್ಪೀಟಸ್ ಬಂದು ತಲುಪಿದ್ದರು. ದಾರಿಯಲ್ಲಿ ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯ ಮಧ್ಯದಲ್ಲಿ ಇರುವ ಕೆಟಲ್‍ಮ್ಯಾನ್ ಸಿಟಿ ಎಂಬ ಸಣ್ಣ ಹಳ್ಳಿಯೊಂದರಲ್ಲಿ ನಿಂತು ಅವರ ಕಡೆಯವನೊಬ್ಬನ ಮನೆಯಿಂದ ಅವರಿಗೆ ಬೇಕಾದ ಗನ್-ಗ್ರೆನೇಡ್‍ಗಳನ್ನು ಕಲೆ ಹಾಕಿಕೊಂಡಿದ್ದರು. ಅವರ ಶಸ್ತ್ರಗಾರದಲ್ಲಿ ಎರಡು ಉಝಿ ಸಬ್-ಮಶೀನ್ ಗನ್, ಒಂದು ಏ.ಕೆ.೭೨, ತಲಾ ಒಂದೊಂದು ಕೋಲ್ಟ್ .೩೪ ಪಿಸ್ಟಲ್ ಜೊತೆಗೆ ಅವುಗಳಿಗೆ ಬೇಕಾಗುವ ಗುಂಡು-ಮದ್ದುಗಳಿದ್ದವು.


ಈ ಮುವರೂ ತಮ್ಮ ಆಯುಧಗಳನ್ನು ಶಾಪಿಂಗ್ ಬ್ಯಾಗುಗಳಲ್ಲಿ ಇಟ್ಟುಕೊಂಡು ಅಂದು ಸಂಜೆ ಗ್ರೇಟ್ ಮಾಲ್ ಒಳಗೆ ಹೊಕ್ಕರು.


***


ದಿವಾಕರ ನೈಕಿ ಔಟ್ಲೆಟ್ ಒಳಗೆ ಶೂಸ್ ನೋಡುತ್ತಿದ್ದ. ಆ ಸಮಯಕ್ಕೆ ಸರಿಯಾಗಿ ಮುಸ್ತಾಫ ಹೊರಗೆ ಕಾದಿದ್ದ ಸೆಕ್ಯೂರಿಟಿ ಗಾರ್ಡ್ ಮುಂದೆ ಬಂದು ನಿಂತ. ಮುಸ್ತಾಫಾನನ್ನು ನೋಡಿ ಗಾರ್ಡ್ ಕೇಳಿದ:


’ಕ್ಯಾನ್ ಐ ಹೆಲ್ಪ್ ಯೂ?"


ಅವನಿಗೆ ಬೇರೇನೂ ಮಾಡುವ ಅವಕಾಶವಿರಲಿಲ್ಲ. ಮುಸ್ತಾಫಾ "ಅಲ್ಲಾಹು ಅಕ್ಬರ್" ಎಂದು ಕೂಗುತ್ತ ಶಾಪಿಂಗ್ ಬ್ಯಾಗ್ ಒಳಗಿದ್ದ ಉಜಿ ಹೊರತೆಗೆದು ಅದರ ಕುದುರೆ ಎಳೆದ. ಸದ್ದಿಲ್ಲದೆ ನೆಲಕ್ಕುರುಳುವಷ್ಟರಲ್ಲಿ ಗಾರ್ಡ್ ಆಗಲೆ ಮೃತನಾಗಿದ್ದ. ಅಷ್ಟು ಹೊತ್ತಿಗೆ ರಫಿ ಮತ್ತು ಅಬ್ದುಲ್ಲ ನೈಕಿ ಔಟ್ಲೆಟ್ ಒಳಗೆ ಸೇರಿಯಾಗಿತ್ತು. ಹೊರಗೆ ಗಾರ್ಡ್ ಬೀಳುತ್ತಿದ್ದಂತೆ ಇಬ್ಬರೂ ’ಅಲ್ಲಾಹು ಅಕ್ಬರ್’ ನಾರೆ ಕೂಗುತ್ತ ತಮ್ಮ ಬಂದೂಕುಗಳಿಂದ ಗುಂಡು ಹಾರಿಸಲಾರಂಬಿಸಿದರು.


ಗುಂಡಿನ ಶಬ್ಧ ಕೇಳಿಬಂದಂತೆ ಹಲವಾರು ಜನ ಗುಂಡಿಗೆ ಸಿಕ್ಕಿ ಮೃತರಾಗಿಯೋ ಗಾಯಗೊಂಡೋ ಕೆಳಗುರುಳಿದರು. ಇನ್ನು ಹಲವರು ಕೌಂಟರ್ ಮತ್ತು ಐಲ್‍ಗಳ ಮಧ್ಯೆ ಬಗ್ಗಿ ಕೂತರು. ಮತ್ತೂ ಕೆಲವರು ತಪ್ಪಿಸಿಕೊಳ್ಳಲು ಬಾಗಿಲ ಕಡೆ ಓಡಿದರು. ಮುಸ್ತಾಫ ಬಾಗಿಲಲ್ಲೇ ಕಾದಿದ್ದು ತಪ್ಪಿಸಿಕೊಳ್ಳಲೋಡಿದವರನ್ನು ಗುಂಡುಗಳಿಂದ ಹೊಡೆಯುತ್ತಿದ್ದ. ರಫಿ ಮತ್ತು ಅಬ್ದುಲ್ಲ ಗುಂಡು ಹಾರಿಸುತ್ತ ಎಲ್ಲ ಐಲ್‍ಗಳ ನಡುವೆ ಓಡುತ್ತಿದ್ದರು. ಈ ಅಂಗಡಿ ಆದಷ್ಟು ಬೇಗನೆ ಮುಗಿಸಿ ಮುಂದಿನ ಅಂಗಡಿಗೆ ದಾಳಿಯಿಡುವುದು, ಹಾಗೆ ಒಂದೊಂದಾಗಿ ಮಾಲ್ ಒಳಗಿರುವ ಎಲ್ಲರನ್ನೂ ಹೊಡೆದು ಸಾಯಿಸುವುದು ಆತಂಕವಾದಿಗಳ ಧ್ಯೇಯವಾಗಿತ್ತು.


ದಿವಾಕರ ಸೇಲ್ಸ್ ಕ್ಲರ್ಕ್ ಒಬ್ಬಳ ಜೊತೆ ಸೇಲ್ಸ್ ಕೌಂಟರ್ ಹಿಂದೆ ಬಗ್ಗಿ ಕೂತಿದ್ದ. ಹೈಸ್ಕೂಲಿನಿಂದ ಡಿಗ್ರೀ ಮುಗಿಯುವವರೆಗೆ ಎನ್.ಸಿ.ಸಿ ಕೆಡೆಟ್ ಆಗಿದ್ದು, ಉತ್ತಮ ಕೆಡೆಟ್ ಎನ್ನಿಸಿ ರಿಪಬ್ಲಿಕ್ ಡೇ ಪರೇಡ್‍ಗೆ ಆರಿಸಲ್ಪಟ್ಟಿದ್ದ. ಶೂಟಿಂಗ್ ಎಕ್ಸರ್ಸೈಜ್‍ಗಳಲ್ಲಿ ಪ್ರವೀಣನೆನಿಸಿಕೊಂಡಿದ್ದ. ರಫಿ ಗುಂಡು ಹಾರಿಸುತ್ತ ಅವರ ಕಡೆ ತಿರುಗಿದಾಗ ಸೇಲ್ಸ್ ಕ್ಲರ್ಕಿಗೆ ಗುಂಡೇಟು ತಾಕಿ, ಆಕೆ ನೆಲಕ್ಕೆ ಬಿದ್ದಳು. ಒಮ್ಮೆಲೆ ದಿವಾಕರನ ಒಂಭತ್ತು ವರ್ಷಗಳ ತರಬೇತಿ ಕ್ರಮವಾಗಿ ಹೊರಬಂತು. ರಫಿಯ ಬೆನ್ನು ದಿವಾಕರನ ಕಡೆಗಿತ್ತು. ದಿವಾಕರ ಅವನ ಮೇಲೆ ಹಾರಿ ಅವನನ್ನು ಕೆಳಗೆ ಬೀಳಿಸಲು ರಫಿಯ ಉಜಿ ಸಬ್-ಮಶೀನ್ ಗನ್ ದಿವಾಕರನ ಕೈಗೆ ಬಂತು. ಕೆಳಗೆ ಬಿದ್ದ ರಫಿ ತನ್ನ ಕೋಲ್ಟ್ .೩೪ ಪಿಸ್ಟಲ್ ತೆಗೆದು ದಿವಾಕರನ ಮೇಲೆ ಗುರಿಯಿಟ್ಟಾಗ ವಿಧಿಯಿಲ್ಲದೆ ದಿವಾಕರ ರಫಿ ಮುಖದ ಕಡೆ ತಿರುಗಿದ್ದ ಉಝಿಯ ಟ್ರಿಗ್ಗರ್ ಎಳೆದ. ರಫಿಯ ತಲೆಚಿಪ್ಪು ಹಾರಿಹೋಗಿ ಕೆಲ ಕ್ಷಣಗಳು ಅದುರಿ ಸ್ಥಿರನಾದ.


ದಿವಾಕರ ಕೌಂಟರ್ ಹಿಂದೆ ಮರಳಿದಾಗ ಬಿದ್ದಿದ್ದ ಸೇಲ್ಸ್ ಕ್ಲರ್ಕ್ ಇನ್ನೂ ಬದುಕಿದ್ದಾಳೆಂದು ಗೊತ್ತಾಯಿತು. ಅವಳ ಗಾಯಗಳನ್ನು ನಿಧಾನವಾಗಿ ಪರೀಕ್ಷಿಸುತ್ತಿದ್ದಂತೆ ಅವಳ ಕಣ್ಣುಗಳು ಪತರುಗುಟ್ಟಿದವು. "ಹ್ಯಾಂಗ್ ಇನ್ ದೇರ್. ಯೂ ಆರ್ ಗೋಯಿಂಗ್ ಟು ಬಿ ಓ.ಕೆ" ಎನ್ನುತ್ತ ಹೊಸ ಸಾಕ್ಸೊಂದನ್ನು ತೆಗೆದು ಅವಳ ತೋಳಿನ ಗಾಯದ ಮೇಲೆ ಬಿಗಿದ. "ದಟ್ ಶುಡ್ ಹೊಳ್ಡ್ ಫಾರ್ ನೌ. ಸ್ಟೇ ವಿತ್ ಮಿ. ಯೂ ಆರ್ ಗೋಯಿಂಗ್ ಇಂಟು ಷಾಕ್". ಆಕೆಯ ಕಣ್ಣುಗಳು ಕೆಲವು ಕ್ಷಣ ಮುಚ್ಚಿ, ಪುನಃ ತೆರೆದವು. ಅಡ್ರಿನಾಲಿನ್ ಮೇಲೆ ಓಡುತ್ತಿದ್ದ ದಿವಾಕರನ ರಕ್ತ ಕೆಂಪೇರಿತ್ತು. "ಐಂ ಗೊಯಿಂಗ್ ಟು ಗೋ ಆಫ್ಟರ್ ದ ಗನ್ಮೆನ್, ವಿಲ್ ಯು ಬಿ ಒ.ಕೆ? ಕೆನ್ ಯು ಸಿಟ್ ಅಪ್?" ಎಂದು ಕೇಳಿದ. ಮಾತು ಹೊರಳದೆ ಆಕೆ "ಹೂಂ" ಎಂದು ತಲೆಯಾಡಿಸಿದಳು. ಆಕೆಯನ್ನು ಕೌಂಟರಿಗೊರಗಿ ಕೂರಿಸಿ, ರಫಿಯ ಕೋಲ್ಟ್ ಆಕೆಯ ಕೈಯಲ್ಲಿಟ್ಟು, ಪುನಃ ಉಝಿ ಹಿಡಿದು ಎದ್ದು ಹೊರಟ.


ಹಿಂದಿನಿಂದ ಗುಂಡು ಹಾರಿಸುವ ಶಬ್ಧವಾಗಿ ತಟ್ಟನೆ ತಿರುಗಿ ನೋಡಿದ ದಿವಾಕರನಿಗೆ ಎ.ಕೆ.೭೨ ಹಿಡಿದು ತನ್ನ ಕಡೆಗೆ ಬರುತ್ತಿದ್ದ ಮುಸ್ತಾಫಾ ಕಾಣಿಸಿದ. ದಿವಾಕರ ತಕ್ಷಣ ನೆಲಕ್ಕೆ ದುಮುಕಿ ಉಜಿಯನ್ನು ಮುಸ್ತಾಫಾ ಕಡೆ ತಿರುಗಿಸಿ ಗುಂಡು ಹಾರಿಸಿದಾಗ ಮುಸ್ತಾಫಾ ಕೈಯಿಂದ ಎ.ಕೆ.೭೨ ಜಾರಿ ಕೆಳಗೆ ಬಿತ್ತು. ಒಂದೆರಡು ಕ್ಷಣ ನಿಂತಲ್ಲಿಯೇ ತೂಗುತ್ತ ನಿಂತ ಮುಸ್ತಾಫಾ ಸ್ಲೋ ಮೋಶನ್‍ನಲ್ಲಿ ನೆಲಕ್ಕೆ ಕುಸಿದ. ಅವನ ಎದೆಗೆ ದಿವಾಕರನ ಆರು ಗುಂಡುಗಳು ತಾಕಿದ್ದವು.


ಇನ್ನೂ ಗುಂಡಿನ ಶಬ್ಧ ಕೇಳಬರುತ್ತಲೇಯಿತ್ತು. ಕನಿಷ್ಠ ಇನ್ನೂ ಒಬ್ಬ ಆತಂಕವಾದಿಯಿದ್ದಾನೆಂದು ಊಹಿಸಿದ ದಿವಾಕರ ಆ ಕ್ಷಾನದಲ್ಲಿ ಮೊಂಡು ಧೈರ್ಯ ಮಾಡಿ ಅವನನ್ನು ಹುಡುಕುತ್ತ ಗುಂಡಿನ ಶಬ್ಧದ ಕಡೆ ಹೊರಟ. ಅಬ್ದುಲ್ಲನಿಗೆ ಮುಸ್ತಾಫಾ ಮತ್ತು ರಫಿ ಸತ್ತಿರುವುದು ಇನ್ನೂ ತಿಳಿದಿರಲಿಲ್ಲ. ತನ್ನ ಕೆಲಸ ತಾನು ಮಾಡುತ್ತಿದ್ದ. ದಿವಾಕರ ’ಬಂದೂಕು ಬಿಸಾಡು’ ಎಂದು ಕೂಗಿದಾಗ ಅವನ ಕೈಯಲ್ಲಿದ್ದ ಉಜಿಯನ್ನು ನೋಡಿ, ಎರಡು ಎರಡು ಜೋಡಿಸಿದ ಅಬ್ದುಲ್ಲ ಪುನಃ ನಾರೆಯೊಂದನ್ನು ಕೂಗುತ್ತ ತನ್ನ ಬಂದೂಕನ್ನು ದಿವಾಕರನ ಕಡೆ ತಿರುಗಿಸಿದ. ಆಗ ದಿವಾಕರ ಅಬ್ದುಲ್ಲನನ್ನೂ ಕೊಲ್ಲಲೇಬೇಕಾಯಿತು.


ಇಷ್ಟುಹೊತ್ತಿಗೆ ನೈಕಿ ಔಟ್ಲೆಟ್ ಆಗಲೇ ನಿಶ್ಯಬ್ಧವಾಗಿತ್ತು. ಹತ್ತಾರು ಜನ ಸತ್ತೋ, ಮೂರ್ಛಿತರಾಗಿಯೋ ಬಿದ್ದಿದ್ದರು. ನಡೆಯಲು ಶಕ್ತರಾಗಿದ್ದವರು ಮುಸ್ತಾಫಾ ಬಿದ್ದ ಮೇಲೆ ಅಂಗಡಿಯಿಂದ ಹೊರಗೆ ಓಡಿಹೋಗಿದ್ದರು. ಇನ್ನೂ ಕೊಲೆಪಾತಕರಿದ್ದಾರೋ ಇಲ್ಲವೋ ಎಂದು ದಿವಾಕರನಿಗೆ ಗೊತ್ತಿರಲಿಲ್ಲ. ಪೋಲೀಸ್ ಅಥವ ಬೇರೆ ಸಹಾಯ ಬರುವವರೆಗೂ ತಾನು ಕೈಯಲ್ಲಿರುವ ಬಂದೂಕು ಹಿಡಿದುಕೊಂಡಿರುವುದೇ ಕ್ಷೇಮವೆಂದೆಣಿಸಿ ಗನ್ ಕೈಯಲ್ಲೇ ಹಿಡಿದು ಕೂತ.


***


"ಪುಲೀಸ್, ಫ್ರೀಜ್, ಡ್ರಾಪ್ ಯೋರ್ ವೆಪನ್ಸ್" ಎಂಬ ಕೂಗು ಕೇಳಿ ಬಂದಾಗ ದಿವಾಕರ ತನ್ನ ಕೈಯಲ್ಲಿದ್ದ ಗನ್ ಕೆಳಗೆಸೆದು ಅದನ್ನು ಕಾಲಿನಿಂದ ದೂರ ತಳ್ಳಿದ. ಗಾಢನೀಲಿ ಬಣ್ಣದ ಯೂನಿಫಾರಂ ಧರಿಸಿದ್ದ ಆಫೀಸರ್ ಒಬ್ಬ ಕೈಯಲ್ಲಿ ಗನ್ ಹಿಡಿದು ದಿವಾಕರನ ಕಡೆ ಬರುತ್ತಿದ್ದ. "ಆನ್ ಯೋರ್ ನೀಸ್. ಹ್ಯಾಂಡ್ಸ್ ಬಿಹೈಂಡ್ ಯೋರ್ ಹೆಡ್". ಅಂಗಡಿಯಲ್ಲಿ ನಡೆದ ಕಗ್ಗೊಲೆಯನ್ನು ನೋಡಿ ಜೊತೆಯಲ್ಲಿ ಬರುತ್ತಿದ್ದ ತನ್ನ ಪಾರ್ಟ್ನರ್ ಕಡೆ ತಿರುಗಿ "ಗೋ ಬ್ಯಾಕ್ ~ಆಂಡ್ ರೇಡಿಯೋ ಫಾರ್ ಬ್ಯಾಕಪ್" ಎನ್ನಲು ಆತ "ಓಕೆ" ಎನ್ನುತ್ತ ಹೊರಹೋದ.


ದಿವಾಕರ ನಿಧಾನವಾಗಿ ಮಂಡಿಯೂರಿ ತಲೆಯಹಿಂದೆ ಕೈ ಜೋಡಿಸುವ ಹೊತ್ತಿಗಾಗಲೇ ಆಫೀಸರ್ ಅವನ ಬಳಿ ಬಂದಿದ್ದ. ದಿವಾಕರ ಅವನ ಎದೆಯಮೇಲಿದ್ದ ಹೆಸರುಪಟ್ಟಿಯನ್ನು ಓದಿದ ’ಕೆನ್ನೆತ್ ಪೇನ್’. ಆ ಹೆಸರು ಎಲ್ಲಿಯೋ ನೋಡಿದ ನೆನಪು. "ಐ ಸೆಡ್ ಹ್ಯಾಂಡ್ಸ್ ಬಿಹೈಂಡ್ ಯೋರ್ ಹೆಡ್" ಎನ್ನುತ್ತ ಮಂಡಿಯೂರಿದ್ದ ದಿವಾಕರನ ಪಕ್ಕೆಗೆ ತನ್ನ ಯೂನಿಫಾರಂ ಬೂಟ್ಸ್‍ನಿಂದ ಬಲವಾಗಿ ಒದ್ದ.


ನೋವು ತಡೆಯಲಾರದೆ ಪಕ್ಕೆ ಹಿಡಿದು ದಿವಾಕರ ಕೆಳಗುರುಳಿ, "ಐ ಕೆನ್ ಎಕ್ಸ್‍ಪ್ಲೇನ್" ಅಂದು ಉಬ್ಬಸದಿಂದ ಗೊಣಗಿದ.


"ಇದೆಲ್ಲ ನಮ್ಮ ಡೀಲ್‍ನಲ್ಲಿರಲಿಲ್ಲ" ಆಫೀಸರ್ ಬೆದರಿಸುವ ಧ್ವನಿಯಲ್ಲಿ ಹೇಳಿದ "ಯಾವುದೂ ಇರಲಿಲ್ಲ"


ಇನ್ನೂ ನೋವಿನಿಂದ ನರಳುತ್ತಿದ್ದ ದಿವಾಕರ ಹೇಳಿದ "ಏನ್ ಹೇಳ್ತಿದ್ದೀರ ನನಗರ್ಥವಾಗ್ತಿಲ್ಲ"


"ನಿಮ್ಮ ಅಟ್ಯಾಕ್ ನಡೀಬೇಕಾಗಿದ್ದದ್ದು ನಾಳೆ, ಇವತ್ತಲ್ಲ"


"ಇವತ್ತಲ್ಲ.." ಧಡ್! ದಿವಾಕರನ ಮಾತು ಆಫೀಸರ್ ಪೇನ್ ಒದೆತದಿಂದ ಇಂಗಿಹೋಗಿ, ನೋವಿನಿಂದ ಬಳಲುತ್ತ ಹೊಟ್ಟೆ ಹಿಡಿದುಕೊಂಡು ಫೀಟಲ್ ಪೊಸಿಶನ್‍ನಲ್ಲಿ ಮಲಗಿದ.


"ನಮ್ಮೂರಿನಲ್ಲಿ ಡೀಲ್ ಮಾಡಿದರೆ ಡೀಲ್, ಅದನ್ನು ಬದಲಾಯಿಸುವ ಹಾಗಿಲ್ಲ. ಹಸನ್ ಅದನ್ನು ಹೇಳಲಿಲ್ಲವೇ?"


"ಯಾವ....ಡೀಲ್? ಹಸನ್...ಯಾರು?"


"ಸುಳ್ಳು ಹೇಳೋದು" ಧಡ್ - ಮತ್ತೊಂದು ಒದೆ "ನಿಲ್ಲಿಸು"


"ಆಫೀಸರ್ - ಹಿ ಇಸ್ ನಾಟ್ ಒನ್ ಆಫ್ ದೆಮ್. ಹಿ ಇಸ್ ದ ಒನ್ ಹು ಕಿಲ್ಡ್ ದೆಮ್" ದಿವಾಕರನ ಜೊತೆ ಅಡಗಿ ಕೂತಿದ್ದ ಸೇಲ್ಸ್ ಕ್ಲರ್ಕ್ ಕೌಂಟರ್ ಹಿಂದಿನಿಂದ ಏಳುತ್ತ ಹೇಳಿದಳು.


ಆಫೀಸರ್ ಕೆನ್ನೆತ್ ಪೇನ್ ಕಕ್ಕಾ ಬಿಕ್ಕಿಯಾಗಿ ಸೇಲ್ಸ್ ಕ್ಲರ್ಕ್ ಹಾಗು ನೆಲದಲ್ಲಿ ಬಿದ್ದಿದ್ದ ದಿವಾಕರನನ್ನು ಸರದಿಯಾಗಿ ಅತ್ತಲಿಂದಿತ್ತ ನೋಡತೊಡಗಿದ. ಕೆಲವು ಕ್ಷಣಗಳು ಯೋಚಿಸಿ ಒಂದು ನಿರ್ಧಾರಕ್ಕೆ ಬಂದಂತೆ ಕಾಣಿಸಿತು. ಸತ್ತು ಬಿದ್ದಿದ್ದ ಮುಸ್ತಾಫಾ ಹೆಗಲಿನಲ್ಲಿದ್ದ ಟೋಟ್‍ಬ್ಯಾಗ್ ಕೈಗೆತ್ತಿಕೊಂಡು ಬಂದ.


"ಓ ಯೇ? ಹಿ ಇಸ್ ನೌ ಎ ಟೆರರಿಸ್ಟ್!" ಎಂದು ದಿವಾಕರನ ಕತ್ತಿಗೆ ಆ ಬ್ಯಾಗ್ ತಗುಲಿಹಾಕಿದ. ನಂತರ ದಿವಾಕರ ಬಿಸಾಡಿದ್ದ ಉಝಿಯನ್ನು ಕೈಗೆತ್ತಿಕೊಂಡು, ಸೇಲ್ಸ್ ಕ್ಲರ್ಕ್ ಕಡೆ ತಿರುಗಿಸಿ "ಎಂಡ್ ಯು ಗಾಟ್ ಕಿಲ್ಡ್ ಬೈ ದೆಮ್" ಎನ್ನುತ್ತ ಗುಂಡು ಹಾರಿಸಿ, ಉಝಿಯನ್ನು ದಿವಾಕರನ ಕಡೆ ಬಿಸಾಡಿ ತನ್ನ ಸರ್ವೀಸ್ ಇಶ್ಯೂ ಗ್ಲಾಕ್ ೯ಎಂಎಂ ಪಿಸ್ಟಲ್ ತೆಗದು ದಿವಾಕರನ ಕಡೆ ತಿರುಗಿ "ದೆನ್ ಐ ಕಿಲ್ಡ್ ಹಿಮ್" ಎಂದ.


ಸೇಲ್ಸ್ ಕ್ಲರ್ಕ್ ರಕ್ತ ಕಾರುತ್ತ ಕೆಳಗುರುಳಿದ್ದು ನೆಲದಲ್ಲಿ ಬಿದ್ದಿದ್ದ ದಿವಾಕರನ ಕಣ್ಣಿಗೆ ಕಾಣಿಸಿದಾಗ ದಿವಾಕರನ ತಲೆಯಲ್ಲಿ ಏನೋ ಕ್ಲಿಕ್ಕಿಸಿತು. ಅವನೂ ಒಂದು ನಿರ್ಧಾರ ಮಾಡಿದ. ಪೇನ್ ಗಮನ ಸೇಲ್ಸ್ ಕ್ಲರ್ಕ್ ಕಡೆ ತಿರುಗಿತ್ತು. ಪೇನ್ ತನ್ನ ಕತ್ತಿಗೆ ತಗುಲಿಹಾಕಿದ ಬ್ಯಾಗ್ ಭಾರವಾಗಿದೆ ಎಂಬ ಅರಿವಾಯಿತು. ಅಳಿದುಳಿದ ಶಕ್ತಿಯನ್ನು ಒಗ್ಗೂಡಿಸಿಕೊಂಡು ಒಮ್ಮೆಲೆ ಎದ್ದು ದಿವಾಕರ ಬ್ಯಾಗನ್ನು ಪೇನ್ ತಲೆಯತ್ತ ಬೀಸಿದ. ಬ್ಯಾಗಿನಿಂದ ಪೇನ್ ದವಡೆಗೆ ಬಲವಾದ ಪೆಟ್ಟುಬಿದ್ದು ತಲೆತಿರುಗಿ ಅವನು ನಿಂತಲ್ಲೇ ಕುಸಿದ. ಚೇತರಿಸಿಕೊಂಡಿದ್ದ ದಿವಾಕರ ಅಂಗಡಿಯಿಂದಾಚೆ ಓಡಿದ. ಮಾಲ್‍ನಿಂದ ಹೊರಗೆ ಹೊರಟಿದ್ದ ಜನಜಂಗುಳಿಯಲ್ಲಿ ಬೆರೆತು ಮಾಲ್‍ನಿಂದ ಹೊರಬಿದ್ದ.


ಪಾರ್ಕಿಂಗ್‍ಲಾಟಿನೊಳಗೆ ಭಾರೀ ಕೋಲಾಹಲ ಕವಿದಿತ್ತು. ಎಲ್ಲೆಡೆ ಜನರು ಅತ್ತಲಿಂದಿತ್ತ ಓಡಾಡುತ್ತಿದ್ದರು. ಪೋಲೀಸ್ ಆಫೀಸರ್‌ಗಳು ಎಲ್ಲೆಡೆ ಕಾವಲಿದ್ದರು. ಹೇಗೋ ತನ್ನ ನೀಸಾನ್ ಹೊರತೆಗೆದುಕೊಂಡು ದಿವಾಕರ ಮಾಲ್ ಸುತ್ತ ಹಾಯುವ ರಸ್ತೆಗೆ ಸೇರಿಕೊಂಡ. ತಡವಾಗುತ್ತಿರುವುದನ್ನು ನೋಡಿ ಅಳುಕುಳಿಯಾಗಿ ಇಷ್ಟು ಹೊತ್ತಿಗಾಗಲೇ ಆಫೀಸರ್ ಪೇನ್ ಎದ್ದು ತನ್ನನ್ನು ಹಿಡಿಯಲು ಹೊಂಚು ಹಾಕುತ್ತಿರಬೇಕೆಂದುಕೊಂಡ.

ನಡೆದ ಘಟನೆಗಳ ಬಗ್ಗೆ ಯೋಚಿಸತೊಡಗಿದ. ಆಫೀಸರ್ ಪೇನ್ ಮೊದಲಿಗೆ ತಪ್ಪಾಗಿ ತನ್ನನ್ನು ಆತಂಕವಾದಿಗಳ ಕಡೆಯವನೆಂದು ಏಕೆ ಭಾವಿಸಿರಬಹುದೆಂದು ವಿಚಾರ ಮಾಡಿದ. ತಾನು ಬೆಳೆಸಿಕೊಂಡಿದ್ದ ಫ್ರೆಂಚ್ ಗಡ್ಡ, ಕೈಯಲ್ಲಿ ಹಿಡಿದಿದ್ದ ಗನ್ ಎಲ್ಲವೂ ಸೇರಿ ಅಷ್ಟು ಆಶ್ಚರ್ಯಕರವೇನಲ್ಲವೆಂದುಕೊಂಡ. ಆದರೆ ಟೆರರಿಸ್ಟ್‍ಗಳ ಜೊತೆ ಪೇನ್ ಮಾಡಿದ್ಕೊಂಡ ಯಾವುದೋ "ಡೀಲ್" ವಿಚಾರವನ್ನು ತನಗೆ ಹೇಳಿದ್ದಾನೆ. ತನ್ನ ಕಣ್ಣು ಮುಂದೆಯೇ ಪೇನ್ ಖುದ್ದಾಗಿ ಸೇಲ್ಸ್ ಕ್ಲರ್ಕನ್ನು ಕೊಂದಿದ್ದಾನೆ. ಇಷ್ಟೆಲ್ಲ ಕಂಡು, ತಿಳಿದಿರುವ ತಾನು ಪೇನ್‍ನ ಮೇಲೆ ಹಲ್ಲೆ ಬೇರೆ ಮಾಡಿದ್ದಾನೆ. ಎಷ್ಟೇ ಕಷ್ಟ ಬಂದರೂ ಪೇನ್ ತನ್ನನು ಹಿಡಿಯುವ ಪ್ರಯತ್ನ ಮಾಡುತ್ತಾನೆಂದು ಅರಿತುಕೊಂಡ.


ದಿವಾಕರ ಮಾಲ್ ಆವರಣದಿಂದ ಹೊರಬಂದ. ಸುತ್ತಲೂ ಪೋಲೀಸ್ ಪಹರೆ. ಎಲ್ಲಾ ಗಾಡಿಗಳನ್ನು ’ಚೆಕ್’ ಮಾಡಿ ಹೊರಕಳಿಸುತ್ತಿದ್ದರು. ದಿವಾಕರನ ಕಾರು ಚೆಕ್‍ಪಾಯಿಂಟ್‍ಗೆ ಬಂದಾಗ ಪೇನ್‍ನ ಪಾರ್ಟ್ನರ್ ಅಲ್ಲೇ ಕಾದಿದ್ದ. ಬೇರೆ ಕಾರುಗಳನ್ನು ಮುಂದೆ ಹೋಗಲು ಬಿಟ್ಟರೂ ದಿವಾಕರನಿಗೆ ಕಾರ್ ಪಕ್ಕಕ್ಕೆ ಸರಿಸಿ ಅಲ್ಲಿಯೇ ನಿಲ್ಲಿಸಲೆಂದು ಆಫೀಸರ್ ಹೇಳಿದ. ದಿವಾಕರನ ಆತಂಕ ಹೆಚ್ಚಿತು, ಯೋಚನೆ ಮಾಡುವ ಸಮಯವಿರಲಿಲ್ಲ. ಒಮ್ಮೆಲೇ ಪೇನ್‍ನ ಹೆಸರು ಹೇಗೆ ಪರಿಚಿತವೆಂದು ತಲೆಗೆ ಹೊಳಿಯಿತು. ಮುಂದೆ ಸ್ವಲ್ಪ ದೂರ ರಸ್ತೆ ಖಾಲಿಯಿತ್ತು. ತನ್ನ ಪಕ್ಕ ಒಂದು ಪೋಲಿಸ್ ಸ್ಕ್‍ವಾಡ್‍ಕಾರ್ ನಿಂತಿತ್ತು. ಬೇರೆ ಸ್ಕ್ವಾಡ್‍ಕಾರ್‌ಗಳು ಕಾಣಿಸುತ್ತಿರಲಿಲ್ಲ.


ದಿವಾಕರ ರಿವರ್ಸ್‍ಗೇರ್ ಹಾಕಿ ತನ್ನ ಹಿಂದಿದ್ದ ಕಾರನ್ನು ಜೋರಾಗಿ ಗುದ್ದಿದ. ಎಲ್ಲರೂ ಆಶ್ಚರ್ಯದಿಂದಿರುವಾಗ, ಫಾರ್ವರ್ಡ್‍ಗೇರ್ ಹಾಕಿ ಪಕ್ಕ ನಿಂತಿದ್ದ ಸ್ಕ್ವಾಡ್‍ಕಾರಿಗೆ ಗುದ್ದಿ ಅದನ್ನು ರಸ್ತೆಯ ಬದಿಯಲ್ಲಿದ್ದ ಗುಂಡಿಗೆ ತಳ್ಳಿದ. ತಕ್ಷಣ ಸ್ಟೀರಿಂಗ್ ತಿರುಗಿಸಿ ಅಲ್ಲಿಂದ ತಪ್ಪಿಸಿಕೊಂಡು ಓಡಿದ. ಸ್ಕ್ವಾಡ್‍ಕಾರ್ ಗುಂಡಿಯಲ್ಲಿದ್ದದ್ದರಿಂದ ಯಾರೂ ತಕ್ಷಣ ಅವನನ್ನು ಅಟ್ಟಿಸಿಕೊಂಡು ಬರುವಹಾಗಿರಲಿಲ್ಲ.


***


ದಿವಾಕರ ಮನೆಗೆ ಹೋದಾಗ ತಾನು ಹೊರಡುವ ಮುನ್ನವಾಡಿದ ಜಗಳವನ್ನು ಉಷಾ ಇನ್ನೂ ಮರೆತಂತೆ ಕಾಣಲಿಲ್ಲ. ಆದರೆ ಈಗ ಅದಕ್ಕೆ ಸಮಯವಿರಲಿಲ್ಲ. ಪೇನ್‍ನ ಪಾರ್ಟ್ನರ್ ತನ್ನನ್ನು ನೋಡಿದ್ದಾನೆ, ಪೇನ್‍ಗೆ ತನ್ನ ವರ್ಣನೆ ಕೊಡಬಲ್ಲ. ಪೇನ್ ಎರಡು-ಎರಡು ಸೇರಿಸಿ ತಾನೇ ಔಟ್ಲೆಟ್‍ನಿಂದ ತಪ್ಪಿಸಿಕೊಂಡವ ಎಂದು ನಿಗಮನ ಮಾಡಬಲ್ಲ. ಪೇನ್‍ನ ಪಾರ್ಟ್ನರ್ ತನ್ನ ಕಾರಿನ ಲೈಸನ್ಸ್‍ನಂಬರನ್ನೂ ನೋಡಿರುತ್ತಾನೆ, ಅದನ್ನು ಸಿಸ್ಟಮ್ ಒಳಗೆ ಹಾಕಿ ತನ್ನ ಅಡ್ರೆಸ್ ಪಡೆಯುವುದು ಕೆಲವೇ ನಿಮಿಷಗಳ ಕೆಲಸ. ಹೆಚ್ಚೆಂದರೆ ತನ್ನ ಬಳಿ ೧೦-೧೫ ನಿಮಿಷಗಳಿರಬಹುದೆಂದು ಎಣಿಸಿದ.


ಅವನ ಮುಖದ ಆತಂಕ ಕಂಡು ಉಷಾಳಿಗೆ ಆಶ್ಚರ್ಯವಾಯಿತು "ಏನಾಯಿತು? ಯಾಕಿಷ್ಟು ಆತಂಕ?"


"ಉಷಾ, ನಾನು ಹೇಳೋದು ಗಮನವಿಟ್ಟು ಕೇಳು.." ಎಂದು ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ಎರಡು ನಿಮಿಷಗಳಲ್ಲಿ ಹೇಳಿದ.


"ಹಾಗೇಕೆ ಮಾಡಿದ್ರಿ? ಪೋಲೀಸ್‍ಗೆ ವಿವರಿಸೋದಲ್ವೇ?"


"ಉಹೂಂ, ನೀರು ಸೇತುವೆ ಕೆಳಗೆ ಹೋಗಿಯಾಯಿತು. ಮೇಲಾಗಿ ಆ ಆಪೀಸರ್ ಯಾರು ಅಂತ ನೆನಪಾಯಿತು. ೨೦೦೭ರಲ್ಲಿ ಡೇನಿಯಲ್ ಫಾಮ್ ಅನ್ನೋ ಒಬ್ಬ ಮೆಂಟಲಿ ರಿಟಾರ್ಡೆಡ್, ಅನ್‍ಆರ್ಮ್ಡ್ ವಿಯಟ್ನಮೀಸ್ ಮನುಷ್ಯನನ್ನು ಗುಂಡಿಟ್ಟು ಕೊಂದವ ಅವನೆ. ೨೦೦೯ರಲ್ಲಿ ಫಾಂಗ್ ಹೋ ಅನ್ನೋ ಸ್ಯಾನ್ ಹೋಸೆ ಸ್ಟೇಟ್ ಯೂನಿವರ್ಸಿಟಿ ಸ್ಟುಡೆಂಟ್‍ಅನ್ನೂ ಹೊಡೆದು, ಒದ್ದು, ಟೇಸರ್ ಮಾಡಿದ ಆಫೀಸರ್ ಈತನೇ. ರೇಸಿಸ್ಟ್ ಮನುಷ್ಯ. ನಂತರ ಪಬ್ಲಿಕ್ ಒತ್ತಡದಿಂದ ಸ್ಯಾನ್ ಹೋಸೆ ಪೋಲೀಸ್ ಡಿಪಾರ್ಟ್ಮೆಂಟ್ ಬಿಟ್ಟು ಮಿಲ್ಪೀಟಸ್ ಪೋಲೀಸ್ ಡಿಪಾರ್ಟ್ಮೆಂಟ್‍ಗೆ ಸೇರಿಕೊಂಡಿದ್ದ. ಈಗ ಟೆರರಿಸ್ಟ್‍ಗಳ ಜೊತೆ ಏನೋ ’ಡೀಲ್’ ಮಾಡಿಕೊಂಡಿದ್ದು ಬಿಟ್ಟುಕೊಟ್ಟಿದ್ದಲ್ಲದೆ ನನ್ನ ಮುಂದೇನೇ ಆ ಕ್ಲರ್ಕನ್ನು ಕೊಂದ. ಅವನ ಕೈಗೆ ಸಿಕ್ಕರೆ..."


"ಈಗೇನೂ ಮಾಡೋದು, ಹಾಗಾದ್ರೆ?"


"ಈಗಿಂದೀಗಲೇ ನಾವಿಬ್ಬರೂ ಇಲ್ಲಿಂದ ತಪ್ಪಿಸಿಕೊಳ್ಳಬೇಕು. ನಾನಿಲ್ಲದೆ ನೀನು ಇವರ ಕೈಗೆ ಸಿಕ್ಕರೆ ನಿನ್ನ ಪ್ರಾಣ ಹಿಂಡಿಬಿಡುತ್ತಾರೆ. ಸಧ್ಯಕ್ಕೆ ಇಲ್ಲಿಂದ ಪರಾರಿಯಾಗೋಣ, ಮುಂದೆ ಯೋಚಿಸುವ"


"ಈಗ್ಲಾ?"


"ರೈಟ್‍ಅವೇ. ಇನ್ನೊಂದೇ ಒಂದು ನಿಮಿಷ ಇಲ್ಲಿರೋದೂ ಡೇಂಜರ್. ಡ್ರಸ್ ಚೇಂಜ್‍ಗೂ ಟೈಮಿಲ್ಲ. ನಡಿ ಹೋಗೋಣ"


ಮನೆಯ ಬಾಗಿಲು ಬೀಗ ಹಾಕಿ ಇಬ್ಬರೂ ಓಡಿ ಕಾರಿನಲ್ಲಿ ಕೂತರು. ಅಷ್ಟು ಹೊತ್ತಿಗಾಗಲೆ ಪೋಲೀಸ್ ಸೈರನ್ ಕೇಳಿಸತೊಡಗಿತ್ತು. ದಿವಾಕರ ರಿವರ್ಸ್ ತೆಗೆದು ಸೈರನ್ ಶಬ್ಧ ಬರುತ್ತಿದ್ದ ವಿರುದ್ಧ ದಿಕ್ಕಿನಲ್ಲಿ ಕಾರ್ ಓಡಿಸತೊಡಗಿದ. "ಕಾರ್ ಲೈಸೆನ್ಸ್‍ನಂಬರ್‌ನಿಂದ ನನ್ನ ಹೆಸರು ಇಷ್ಟುಹೊತ್ತಿಗಾಗಲೆ ಅವರಿಗೆ ಗೊತ್ತಾಗಿರತ್ತೆ. ಈ ಕಾರೂ ಇನ್ನು ಸ್ವಲ್ಪ ಹೊತ್ತಿಗೇ ಕೈಬಿಡಬೇಕು"


"ಇದೇನು?" ಉಷಾ ಕೇಳಿದಳು


"ಯಾವುದು..." ಉಷಾ ತನ್ನ ಹೆಗಲಿನಲ್ಲಿದ್ದ ಬ್ಯಾಗನ್ನು ತೋರಿಸಿದಾಗ ದಿವಾಕರನಿಗೆ ತಾನು ಪೋಲೀಸ್ ಆಪೀಸರನ್ನು ಚೆಚ್ಚಿದ ಬ್ಯಾಗು ಇನ್ನೂ ತನ್ನ ಕೈಯಲ್ಲೇ ಇದೆಯೆಂದು ಅರಿವಾಯಿತು.


"ಗೊತಿಲ್ಲ...ಇದೇ ಆ ಆಫೀಸರ್ ಆ ಟೆರರಿಸ್ಟ್ ಕೈಯಿಂದ ತೆಗೆದು ನನಗೆ ತಗುಲಿಹಾಕಿದ ಬ್ಯಾಗು. ನೋಡು ಏನಿದೆ"


"ಏನೋ ಬುಕ್ ಇರಬೇಕು, ಭಾರವಾಗಿದೆ" ಎನ್ನುತ್ತ ಉಷಾ ಬ್ಯಾಗಿನ ಜಿಪ್ ತೆಗೆದಳು. "ಡಾಲರ್ಸ್"


"ಏನು?" ದಿವಾಕರ ಕೇಳಿದ


"ಇದರ ಭರ್ತಿ ನೂರು ಡಾಲರ್ ನೋಟುಗಳು"


"ಶಿಟ್! ಎಲ್ಲಾ ಇನ್ನೂ ಕಾಂಪ್ಲಿಕೇಟ್ ಆಗಿಹೋಯ್ತು"


***


ಸ್ಯಾನ್ ಹೋಸೆ ಏರ್ಪೊರ್ಟ್ ಹತ್ತಿರ ೨೪ಘಂಟೆ ತೆರೆದಿರುವ ಸೇಫ್‍ವೇ ಅಂಗಡಿಯೊಂದರಲ್ಲಿ ಉಷಾಳನ್ನು ಬಿಟ್ಟು "ಸ್ವಲ್ಪ ಹೊತ್ತಿನಲ್ಲಿ ಬಂದು ನಿನ್ನನ್ನು ಕರೀತೀನಿ, ಒಳಗೇ ಇರು, ಆಚೆ ಬರಬೇಡ" ಎಂದು ಹೇಳಿ ಹೊರಟುಹೋಗಿದ್ದ ದಿವಾಕರನನ್ನು ಅಂಗಡಿಯೊಳಗೇ ಉಷಾ ಕಾದಿದ್ದಳು. ಹೋಗಿ ೪೫ ನಿಮಿಷಗಳಲ್ಲಿ ಹಿಂತಿರುಗಿದ ದಿವಾಕರ ಅವಳನ್ನು ಸುಮಾರು ೨೦ ವರ್ಷ ಹಳೆಯ ಹೋಂಡಾ ಕಾರ್ ಒಂದರೆಡೆಗೆ ಕರೆದೊಯ್ದ.


"ಇದೂ..." ಎಂದು ಉಷಾ ಪ್ರಶ್ನೆ ಕೇಳ ಹೊರಟಾಗ, "ಇಷ್ಟು ಹೊತ್ತಿಗಾಗಲೇ ನನ್ನ ಕಾರಿನ ಮೇಲೆ ಆಲ್ ಪಾಯಿಂಟ್ಸ್ ಬುಲೆಟಿನ್ ಬಂದಿರುತ್ತೆ. ಎಲ್ಲಾ ಪೋಲೀಸರೂ ಆ ಕಾರನ್ನು ಹುಡುಕ್ತಿರ್ತಾರೆ" ಎಂದ.


"ಯಾರದ್ದು ಇದು?"


"ಗೊತ್ತಿಲ್ಲ"


"ಅಂದರೆ"


"ಏರ್ಪೊಟ್ ಲಾಂಗ್ ಟರ್ಮ್ ಪಾರ್ಕಿಂಗ್ ಲಾಟ್‍ನಿಂದ ತೊಗೊಂಡು ಬಂದೆ"


"ತೊಗೊಂಡು...?"


ನಿಟ್ಟುಸಿರು ಬಿಟ್ಟು "ಹೂ... ಕದೀಬೇಕಾಯಿತು. ಹಿಂತಿರುಗಿಸೋಣ. ಯೋಚನೆ ಮಾಡಬೇಡ. ಈಗ ಅದಕ್ಕೆ ಸಮಯವಲ್ಲ. ಮುಂದೇನು ಮಾಡಬೇಕೋ ಯೋಚಿಸಬೇಕು"


"ನನಗಂತೂ ಏನೂ ತೋಚುತ್ತಿಲ್ಲ. ನೀವೇನು ಮಾಡ್ತಿದ್ದೀರೋ ಅರ್ಥವಾಗ್ತಿಲ್ಲ. ಈಗೇನು ಪ್ಲಾನು?"


ವಾಚ್ ನೋಡಿಕೊಳ್ಳುತ್ತ ದಿವಾಕರ "ಈಗಾಗಲೆ ಘಂಟೆ ೧೨ಆಯಿತು. ಇವತ್ತು ರಾತ್ರಿ ನಿದ್ದೆಯಿಲ್ಲ ಬಿಡು. ಮೊದಲು ಸ್ಯಾನ್ ಫ್ರಾನ್ಸಿಸ್ಕೊ ಸೇರಬೇಕು. ನಾಳೆ ಬೆಳಗ್ಗೆ ಇಂಡಿಯನ್ ಕಾನ್ಸುಲೇಟ್ ಹೋಗಿ ಅಲ್ಲಿ ಮುಂದಿನ ವಿಚಾರ ನೋಡಬೇಕು. ಬೆಳಗಿನವರೆಗು ಪೋಲೀಸರಿಂದ ತಪ್ಪಿಸಿಕೊಂಡಿದ್ದರೆ ಮುಂದೆ ಉಂಟು."


"ಸ್ಯಾನ್ ಫ್ರಾನ್ಸಿಸ್ಕೊಗೆ ಹೋಗಕ್ಕೆ ಹೆಚ್ಚಂದರೆ ಒಂದು ಘಂಟೆ ಬೇಕು ಅಷ್ಟೆ. ಉಳಿದ ಟೈಮ್?"


"ಈ ಕಾರಲ್ಲೇ ಕಳೀಬೇಕು. ಒಂದು ಕೆಲಸ ಮಾಡೋಣ, ಈಗಲೇ ಸೌತ್ ಸ್ಯಾನ್ ಫ್ರಾನ್ಸಿಸ್ಕೊಗೋ, ಡೇಲಿ ಸಿಟಿಗೋ ಡ್ರೈವ್ ಮಾಡಿ ಅಲ್ಲೇ ಕಾದಿರೋಣ. ಬೆಳಗ್ಗೆ ೮:೦೦ ಘಂಟೆಯಷ್ಟು ಹೊತ್ತಿಗೆ ಕಾನ್ಸುಲೇಟ್ ಸೇರಿ ಅಲ್ಲಿ ಕಾನ್ಸಲ್ ಜನರಲ್‍ಗೆ ವಿಚಾರ ತಿಳಿಸೋಣ"


ಕಾರ್ ಸ್ಟಾರ್ಟ್ ಮಾಡಿ ಸ್ವಲ್ಪ ದೂರ ಚಲಿಸಿ "ಈವತ್ತಿನ ಮಟ್ಟಿಗೆ ಫ್ರೀವೇ ಅವಾಯ್ಡ್ ಮಾಡಿದರೇನೇ ಒಳ್ಳೇದು. ಅದಕ್ಕೇ ಒಳಗಿನ ರಸ್ತೆಲೇ ಹೋಗ್ತೀನಿ. ಎಲ್ ಕಮೀನೋ ರೆಯಾಲ್ ಸ್ಯಾನ್ ಫ್ರಾಂಸಿಸ್ಕೋವರೆಗೂ ಹೋಗತ್ತೆ. ಅಲ್ಲಿ ಪೋಲೀಸ್ ಪಹರೆ ಕಡಿಮೆ ಇರಬಹುದು. ನಿಧಾನವಾದರೂ ಪರವಾಗಿಲ್ಲ, ಅದರ ಮೇಲೇ ಹೋಗೋಣ"


ಉಷಾ ಏನೂ ಮಾತನಾಡಲಿಲ್ಲ. ಸ್ವಲ್ಪ ಮೌನದ ನಂತರ "ನಿನ್ನ ಊಟವಾಯಿತಾ?" ಎಂದು ದಿವಾಕರನೇ ಕೇಳಿದ. ಉಷಾ ಇಲ್ಲವೆಂದು ತಲೆಯಾಡಿಸಿದಳು. ದಿವಾಕರನಿಗೂ ಹೊಟ್ಟೆ ಕಾದಿತ್ತು. ಇಂತಹ ಸಮಯದಲ್ಲೂ ಹಸಿವಾದೀತೆಂದು ತಿಳಿದು ಆಶ್ಚರ್ಯವಾಯಿತು. ದಾರಿಯಲ್ಲಿ ಒಂದು ಬರ್ಗರ್ ಕಿಂಗ್ ಬಳಿ ನಿಲ್ಲಿಸಿ ಇಬ್ಬರಿಗೂ ವೆಜ್ಜಿ ಬರ್ಗರ್, ಫ್ರೈಸ್ ಮತ್ತು ಶೇಕ್ ತರಲು ಉಷಾಳನ್ನು ಕಾರಿನಲ್ಲೇ ಬಿಟ್ಟು ದಿವಾಕರ ಒಳಗೆ ಹೋದ. ರೆಸ್ಟೋರಾಂಟ್‍ಒಳಗೆ ಟಿವಿಯಲ್ಲಿ ಸಿ.ಎನ್.ಎನ್ ನ್ಯೂಸ್ ಬರುತ್ತಿತ್ತು. ನ್ಯೂಸ್ ಭರ್ತಿ ಗ್ರೇಟ್ ಮಾಲ್ ಟೆರರಿಸ್ಟ್ ಅಟ್ಯಾಕ್ ವಿಚಾರವೇ. ಆಕ್ರಮಣದಲ್ಲಿ ಮಡಿದವರ, ಗಾಯಗೊಂಡವರ ಸಂಖ್ಯೆಗಳು, ಕೊನೆಗೆ ತಪ್ಪಿಸಿಕೊಂಡ ಟೆರರಿಸ್ಟ್ ಎಂದು ದಿವಾಕರನ ಡ್ರೈವರ್ಸ್ ಲೈಸನ್ಸ್ ಫೋಟೋ ಸಮೇತ ವಿಸ್ತಾರವಾಗಿ ಎಲ್ಲಾ ವಿಚಾರವನ್ನೂ ಹೇಳುತ್ತಿದ್ದರು. ತಲೆ ತಗ್ಗಿಸಿಕೊಂಡು, ಯಾರಿಗೂ ಮುಖ ಕೊಡದೆ, ತಿಂಡಿ ತೆಗೆದುದುಕೊಂಡು ದಿವಾಕರ ಹೊರಬಿದ್ದ. ತಿಂಡಿ ತಿನ್ನುತ್ತ ವಿಚಾರವೆಲ್ಲವನ್ನೂ ಉಷಾಳಿಗೆ ಹೇಳಿದ.


"ಈಗೇನು ಮಾಡೋದು?" ಎಂದು ಉಷಾ ಕೇಳಿದಾಗ, "ಏನೂ ಬದಲಾಗಿಲ್ಲ. ನಮ್ಮ ಪ್ಲಾನ್ ಇನ್ನೂ ಹಾಗೇ ಇದೆ. ಆದರೆ ಅದಕ್ಕಿಂತ ಮುಂಚೆ ನೀನು ಒಂದೆರಡು ಕೆಲಸ ಮಾಡಬೇಕು" ಎಂದ.


ಬರ್ಗರ್ ಮುಗಿಸಿ, ಮತ್ತೆ ಹೊರಟು ೨೪ಘಂಟೆ ತೆಗೆದಿರುವ ವಾಲ್‍ಗ್ರೀನ್ಸ್ ಫಾರ್ಮಸಿಯೊಂದರ ಮುಂದೆ ನಿಲ್ಲಿಸಿದ. ಉಷಾಳನ್ನು ಒಳಗೆ ಕಳಿಸಿ ಒಂದು ರೇಝರ್, ಒಂದು ಲೋ ಪವರ್ ರೀಡಿಂಗ್ ಗ್ಲಾಸ್, ಒಂದು ಸೋಪು, ಒಂದೆರಡು ಬಾಟಲ್ ನೀರು, ಮತ್ತು ಒಂದು ಬೇಸ್‍ಬಾಲ್ ಟೋಪಿ ತರಿಸಿಕೊಂಡ. ಪಾರ್ಕಿಂಗ್ ಲಾಟ್ ಮೂಲೆಗೆ ಹೋಗಿ ನೀರು, ಸೋಪು, ರೇಝರ್ ಉಪಯೋಗಿಸಿ ತಾನು ಹತ್ತು ವರ್ಷಗಳಿಂದ ಬೆಳೆಸಿಕೊಂಡಿದ್ದ ಮೇಸೆ, ಫ್ರೆಂಚ್ ಗಡ್ಡವನ್ನು ಬೋಳಿಸಿಕೊಂಡು, ಕನ್ನಡಕ, ಟೋಪಿಗಳನ್ನು ಧರಿಸಿ ಕಾರಿಗೆ ಹಿಂತಿರುಗಿದಾಗ ಉಷಾಳೇ ’ಇದು ದಿವಾಕರನೆಯೇ? ಎನ್ನುವಂತೆ ಒಂದೆರಡು ನಿಮಿಷ ತಬ್ಬಿಬ್ಬಾಗಿ ನೋಡಿದಳು.


ಇಷ್ಟು ಹೊತ್ತಿಗಾಗಲೆ ಘಂಟೆ ೨:೩೦ ಹೊಡೆದಿತ್ತು. ಐ-೨೮೦ ಫ್ರೀವೇ ಹಿಡಿದು ರೆಸ್ಟ್ ಏರಿಯಾ ಒಂದರಲ್ಲಿ ನಿಲ್ಲಿಸಿದ. ಚಳಿ ಜೋರಾಗಿಯೇ ಇದ್ದರೂ ಕಾರಿನ ಹೀಟರ್ ಕೆಲಸ ಮಾಡುತ್ತಿತ್ತು. "ಸ್ವಲ್ಪ ಹೊತ್ತು ಮಲಗು. ನಾನೂ ಪ್ರಯತ್ನ ಮಾಡ್ತೀನಿ. ನಾಳೆ ತುಂಬಾ ಕೆಲಸ ಇದೆ" ಎಂದು ಸೀಟಿನಲ್ಲಿ ಹಿಂದಕ್ಕೊರಗಿ ಕಣ್ಣು ಮುಚ್ಚಿದ.


ಕೆಲ ನಿಮಿಷಗಳ ಮೌನದ ನಂತರ ಉಷಾಳ ಮೆಲುದನಿ ಮೌನವನ್ನು ಕತ್ತರಿಸಿತು. "ರೀ.. ಎಲ್ಲ ಸರಿ ಹೋಗುತ್ತಾ? ನಾಳೆ ಏನಾದರೂ ಹೆಚ್ಚು ಕಡಿಮೆ..?"


ಉಷಾಳ ಕೈಯನ್ನು ತನ್ನ ಹಸ್ತದಿಂದ ಮುಚ್ಚಿ ಅವಳಿಗೆ ಆಸರೆ ನೀಡುತ್ತ "ಲೆಟ್ಸ್ ಹೋಪ್ ಸೋ" ಎಂದು ಅವಳ ಕಡೆ ಒಂದು ಸಣ್ಣ ನಗೆ ಬೀರಿದ. ಸಂಜೆಯ ಜಗಳ ಮರೆತೇ ಹೋಗಿತ್ತು. ಯಾವುದೋ ಕಾಲದಲ್ಲಿ ನಡೆದಿದ್ದೆನ್ನಿಸುತ್ತಿತ್ತು. ’ಕೆಲವೇ ಘಂಟೆಗಳ ಹಿಂದೆಯೇ?’ ಎಂದು ದಿವಾಕರನಿಗೇ ನಂಬಲಾಗಲಿಲ್ಲ.


***


"ಕ್ರ್ಯಾಪ್..." ಎಂಬ ಗೊಣಗು ಕೇಳಿ ಉಷಾಗೆ ಎಚ್ಚರವಾಯಿತು. ದಿವಾಕರ ಸಣ್ಣ ರಸ್ತೆಯೊಂದರಲ್ಲಿ ವೇಗವಾಗಿ ಕಾರು ಚಲಿಸುತ್ತಿದ್ದ.

"ಏನ್..??" ಉಷಾಗೆ ಎಲ್ಲ ನೆನಪಾಗಲು ಕೆಲವು ಕ್ಷಣಗಳೇ ಬೇಕಾಯಿತು. ನೋಯುತ್ತಿದ್ದ ಕತ್ತನ್ನು ಕೈಯಿಂದ ಉಜ್ಜುತ್ತ "ಟೈಂ ಎಷ್ಟಾಯಿತು?" ಎಂದು ಕೇಳಿದಳು.


"ಆಗಲೇ ೮:೦೦ಆಗಿಹೋಯಿತು" ಕೆಲ ಕ್ಷಣಗಳ ನಂತರ "ನೆನ್ನೆ ವಾಲ್‍ಗ್ರೀನ್ಸ್‍ನಲ್ಲಿ ಹೇಗೆ ದುಡ್ಡು ಕೊಟ್ಟೆ?"


"ಏನು? ಹೇಗೆ ದುಡ್ಡು ಕೊಟ್ಟೆ ಅಂದ್ರೆ? ಓಹ್ ಕ್ರೆಡಿಟ್‍ಕಾರ್ಡ್ ಕೊಟ್ಟೆ ಸಿಟಿ ಮಾಸ್ಟರ್‌ಕಾರ್ಡ್..."


ಸಿಟ್ಟಿನಿಂದ "ತಲೇಲಿ ಬುದ್ಧಿ ಇದಿಯೋ.." ಎಂದು ಶುರು ಮಾಡಿದ ದಿವಾಕರ ಅವಳ ಮೂಖದಲ್ಲಿ ಮೂಡಿದ ಕಾತರ ಕಂಡು "ಕ್ರ್ಯಾಪ್! ನಿನಗೆ ಕ್ಯಾಶ್ ಕೊಡೋಕ್ಕೆ ಹೇಳಬೇಕಿತ್ತು. ಆ ಕ್ರೆಡಿಟ್‍ಕಾರ್ಡ್ ಇಬ್ಬರ ಹೆಸರಲ್ಲೂ ಇದೆ. ಕಾರ್ಡ್ ಆಕ್ಟಿವಿಟಿ ಟ್ರೇಸ್ ಮಾಡಿ ಸ್ಯಾನ್ ಫ್ರ್ಯಾನ್ಸಿಸ್ಕೋಗೆ ಬಂದಿದ್ದೀವಿ ಅಂತ ಪತ್ತೆ ಹಚ್ಚಿದ್ದಾರೆ. ರೇಡಿಯೋ ನ್ಯೂಸಲ್ಲಿ ’ಸಸ್ಪೆಕ್ಟ್ ಹ್ಯಾಸ್ ಬೀನ್ ಟ್ರೇಸ್ಡ್ ಟು ಸ್ಯಾನ್ ಫ್ರಾನ್ಸಿಸ್ಕೋ’ ಅಂತ ಹೇಳ್ತಾಯಿದ್ದರು.


ಉಷಾಳ ಮುಖ ತಕ್ಷಣ ಸಪ್ಪಗಾಯಿತು. ಮೆಲ್ಲನೆ ಧ್ವನಿಯಲ್ಲಿ ಕಾರಿನ ರೇಡಿಯೋ ಮೊಳಗುತ್ತಿದ್ದದ್ದು ಅವಳ ಗಮನಕ್ಕೆ ಬಂತು. ದಿವಾಕರನ ತೋಳಿನ ಮೇಲೆ ತನ್ನ ಕೈ ಇರಿಸಿ ಮೆಲು ಧ್ವನಿಯಲ್ಲಿ "ಸಾರಿ, ನನಗೆ ಐಡಿಯಾನೂ ಇರಲಿಲ್ಲ" ದಿವಾರಕರ ಅವಳ ಕೈಯನ್ನು ಮೆಲ್ಲನೆ ತಟ್ಟಿ ಹೆಗಲೇರಿಸಿದ. "ಇನ್ನೇನು ಹೇಳ್ತಿದ್ದಾರೆ?"


ದಿವಾಕರ ಒಂದು ಕ್ಷಣ ಯೋಚಿಸಿ "ಇನ್ನೇನೂ ಹೇಳ್ತಿಲ್ಲ. ಆದರೆ ಸಿಟಿ ಭರ್ತಿ ಬಂದೋಬಸ್ತ್ ಮಾಡಿದ್ದಾರೆ. ಕಾನ್ಸುಲೇಟ್‍ಗೆ ಹೋಗೋ ದಾರಿಗಳನ್ನೆಲ್ಲ ಬ್ಲಾಕ್ ಮಾಡಿ ಒಂದೊಂದು ಗಾಡಿಯನ್ನೂ ಚೆಕ್ ಮಾಡ್ತಿರೋ ಹಾಗಿದೆ. ಗೇರಿ ಬುಲೆವಾರ್ಡ್ ಎರಡೂ ಕಡೆಯಿಂದ ಚೆಕ್ಕಿಂಗ್ ಮಾಡಿದ್ದಾರೆ. ಕ್ಯಾಲಿಫೋರ್ನಿಯಾ ಸ್ಟ್ರೀಟ್ ಇಂದ ಆರ್ಗುಎಲ್ಲೋ ಬುಲೆವಾರ್ಡ್ ಪೂರ್ತಿ ಬಂದ್ ಮಾಡಿದ್ದಾರೆ. ಈಗ ಟರ್ಕ್ ಬುಲೆವಾರ್ಡಿಂದ ಆರ್ಗುಎಲ್ಲೋಗೆ ಹೋಗೋ ದಾರಿ ಓಪನ್ ಆಗಿದಿಯೋ ನೋಡಬೇಕು. ಅದೂ ಬಂದಾಗಿದ್ದರೆ ಗೊತ್ತಿಲ್ಲ" ಎಂದ. ಆರ್ಗುಎಲ್ಲೋ ಬುಲೆವಾರ್ಡ್, ಗೇರಿ ಬುಲೆವಾರ್ಡ್ ರಸ್ತೆಗಳು ಸೇರುವ ಸ್ಥಳದ ಸಮೀಪ ೫೪೦ ಆರ್ಗುಎಲ್ಲೋ ಬುಲೆವಾರ್ಡ್ ಮೇಲಿರೋ ಕಾನ್ಸುಲೇಟ್ ಜನರಲ್ ಆಪ್ ಇಂಡಿಯಾ ಆಫೀಸ್ ಇಬ್ಬರಿಗೂ ತಿಳಿದಿದ್ದ ಸ್ಥಳವೇ ಆಗಿತ್ತು. ಕಳೆದ ೧೦ ವರ್ಷಗಳಿಂದ ಹತ್ತಾರು ಬಾರಿ ಇಬ್ಬರೂ ಅಲ್ಲಿಗೆ ಬಂದಿದ್ದರು. ಮೇಲಾಗಿ ಉಷಾ ಸ್ಯಾನ್ ಫ್ರಾನ್ಸಿಸ್ಕೋ ಸಿಟಿಯಲ್ಲಿ ಹಿಂದೊಮ್ಮೆ ೬-೮ ತಿಂಗಳು ಕೆಲಸ ಮಾಡಿದ್ದರಿಂದ ದಿವಾಕರ ಹೇಳಿದ ರಸ್ತೆಯ ವಿವರ ಉಷಾಗೆ ತಕ್ಷಣ ತಿಳಿಯಿತು.


ವ್ಯಾನ್ ನೆಸ್ ಅವೆನ್ಯೂಗೆ ಬಲಕ್ಕೆ ತಿರುಗಿ ಸ್ವಲ್ಪ ದೂರದ ನಂತರ ಟರ್ಕ್ ಬುಲೆವಾರ್ಡ್‍ಗೆ ಪುನಃ ಬಲಕ್ಕೆ ತಿರುಗಿದರು. ಒಂದೆರಡು ಮೈಲಿ ಚಲಿಸಿದಮೇಲೆ ಆರ್ಗುಎಲ್ಲೋ ಬುಲೆವಾರ್ಡ್ ಹತ್ತಿರ ಬರುತ್ತಿದ್ದಂತೆ ಟ್ರಾಫಿಕ್ ಬ್ಯಾಕಪ್ ಆಗಿರುವುದು ಕಂಡು ಆ ರಸ್ತೆಯಲ್ಲೂ ಪಹರೆ ಇರುವುದೆಂದು ಇಬ್ಬರಿಗೂ ಅರ್ಥವಾಯಿತು. ಟ್ರಾಫಿಕ್ ನೋಡುತ್ತಿದ್ದ ದಿವಾಕರ ಸಿಗ್ನಲ್ ಲೈಟ್ ಗಮನಿಸದೆ ಕೆಂಪು ಲೈಟ್ ಹೊತ್ತಿದ್ದಾಗ ರಸ್ತೆ ದಾಟಿಸಿದ. ಹತ್ತಿರದಲ್ಲೇ ಮೋಟರ್‌ಬೈಕ್ ಮೇಲೆ ಕಾದು ನಿಂತಿದ್ದ ಪೋಲೀಸ್ ಆಫೀಸರ್ ದಿವಾಕರನ ಹಿಂದೆ ಸಿರೆನ್ ಮೊಳಗಿಸಿಕೊಂಡು ಬಂದಾಗ ಸಣ್ಣ ಗಲ್ಲಿಯೊಂದರಲ್ಲಿ ದಿವಾಕರ ಕಾರನ್ನು ತಿರುಗಿಸಿದ. ಸಿಗ್ನಲ್ ಹಸಿರಾಗಿ ಪೋಲೀಸ್ ಆಫೀಸರ್ ಬರುವ ಹೊತ್ತಿಗೆ ದಿವಾಕರ ಆಗಲೇ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಒಂದನ್ನು ಹೊಕ್ಕಿ ಕಾರನ್ನು ಅಲ್ಲೇ ನಿಲ್ಲಿಸಿದ.


ಬಾಗಿಲು ತೆಗೆಯುತ್ತ "ಬ್ಯಾಗ್ ಎತ್ತಿಕೋ, ನಡೀ ಹೋಗೋಣ" ಎಂದು ಉಷಾಳಿಗೆ ಕೂಗಿದ.


"ಯಾವ ಬ್ಯಾಗು...? ಓಹ್!" ಡಾಲರ್ ನೋಟುಗಳಿದ್ದ ಬ್ಯಾಗನ್ನು ಎತ್ತಿಕೊಂಡು ಇಬ್ಬರೂ ಕಾರಿನಿಂದ ಇಳಿದು ಓಡಿದರು. ಸ್ವಲ್ಪ ದೂರ ಓಡಿದ ಮೇಲೆ ಅಪಾರ್ಟ್ಮೆಂಟಿನ ಲಾಂಡ್ರಿ ರೂಂ ಕಾಣಿಸಿಕೊಂಡಿತು. ಬಾಗಿಲು ತೆಗೆದು ನೋಡಿದಾಗ ಅದು ಖಾಲಿಯಾಗಿತ್ತು. ಇಬ್ಬರೂ ಒಳಗೆ ಹೋಗಿ ಬಾಗಿಲು ಮುಚ್ಚಿಕೊಂಡರು.


"ರಸ್ತೆ ನೋಡಿಕೊಂಡು ಗಾಡಿ ಓಡಿಸೋಕ್ಕೆ ಆಗೋಲ್ವಾ?" ರೋಸತ್ತು ಉಷಾ ಕೇಳಿದಳು


"ನನ್ನ ತಲೇಲಿ ಇವತ್ತು ನೂರಾರು ಯೋಚನೆ ತುಂಬಿತ್ತು. ಅಲ್ಲೇ ಪೋಲೀಸ್ ಕಾದಿದ್ದಾನೆ ಅಂತನೂ ಗಮನಿಸಲಿಲ್ಲ" ಸಿಟ್ಟಿನಿಂದ ದಿವಾಕರ ಹಿಂತಿರುಗಿಸಿದ.


ಕೋಪದಿಂದ ಇಬ್ಬರೂ ವಿರುದ್ಧ ದಿಕ್ಕುಗಳಲ್ಲಿ ತಿರುಗಿ ನಿಂತರು. ಕೆಲ ಕ್ಷಣಗಳ ನಂತರ ಉಷಾ ದಿವಾಕರನ ಬಳಿ ಬಂದು ಅವನ ತೋಳಿನ ಮೇಲೆ ಕೈಯಿರಿಸಿ "ಸಾರಿ" ಎಂದು ವಿನೋದ ರಹಿತ ನಗೆ ಬೀರಿದಳು. ಅವಳ ಕೈ ನಡುಗುತ್ತಿದ್ದದ್ದನ್ನು ಕಂಡು ದಿವಾಕರನೂ ಅವಳನ್ನೇ ದಿಟ್ಟಿಸಿ ನೋಡಿ "’ಸ್ ಓ.ಕೆ. ಬಾಯಿಲ್ಲಿ" ಎಂದು ಅವಳ ಹೆಗಲುಗಳ ಮೇಲೆ ತನ್ನ ಕೈಗಳನ್ನಿರಿಸಿದ. ನಿಟ್ಟುಸಿರು ಬಿಡುತ್ತ ಉಷಾ ಅವನ ಮೇಲೆ ಒರಗಿದಳು. "ಕಾನ್ಸುಲೇಟ್ ಸೇರೋ ಹಾಗಿಲ್ಲ ಅಂದ ಹಾಗಾಯಿತು. ಇನ್ನೂ ಎಷ್ಟು ಹೊತ್ತು ಇಲ್ಲೇ ಕಾಯೋದು? ಮುಂದೇನು ಮಾಡೋದು?"


"ಸ್ವಲ್ಪ ಹೊತ್ತು ಕಾಯ್ದು, ಮುಂದೇನು ಮಾಡಬೇಕು ಯೋಚನೆ ಮಾಡೋಣ" ಸ್ವಲ್ಪ ಮೌನದ ನಂತರ "ನೀನು... ಹೆಚ್ಚು ಯೋಚನೆ ಮಾಡದೆ ನೆನ್ನೆ ನಿನ್ನನ್ನೂ ಓಡಿಸಿಕೊಂಡು ಬಂದುಬಿಟ್ಟೆ. ನೀನು ವಾಪಸ್ ಊರಿಗೆ ಹೋಗು. ಏನಾಗುತ್ತೋ ನೋಡೇ ಬಿಡೋಣ"


ಉಷಾಳ ಕಣ್ಣುಗಳಲ್ಲಿ ಕಣ್ಣೀರು ತೇಲಿದವು. "ನಿಮ್ಮನ್ನ ಬಿಟ್ಟು... " ಎಂದು ತಡವರಿಸಿ, ನಂತರ "ಇಷ್ಟು ಹೊತ್ತಿಗೆ ನಾನು ನಿಮ್ಮ ಜೊತೆ ಇದ್ದೀನಿ ಅಂತ ಅಥಾರಿಟೀಸ್‍ಗೆ ಗೊತ್ತಾಗಿರುತ್ತೆ. ಸಧ್ಯಕ್ಕೆ ನಿಮ್ಮ ಜೊತೆ ಇದ್ದರೆನೇ ಕ್ಷೇಮ, ನನಗೂ ಧೈರ್ಯ" ಎಂದಾಗ ದಿವಾಕರ ಅವಳ ಹೆಗಲನ್ನು ಮೆಲುವಾಗಿ ಒತ್ತಿ, ಅವಳನ್ನು ತನ್ನೆಡೆಗೆ ಸೆಳೆದುಕೊಂಡನು.


ಸುಮಾರು ಅರ್ಧ ಘಂಟೆ ಆ ಲಾಂಡ್ರಿರೂಮಿನಲ್ಲೇ ಕಳೆದರು. ಆ ಸಮಯದಲ್ಲಿ ದಿವಾಕರನೂ ವಿಕಲ್ಪಗಳನ್ನು ಯೋಚಿಸಿದ. ಕೊನೆಗೆ "ಕಮಾನ್, ಲೆಟ್ಸ್ ಗೋ" ಎಂದು ಹೊರಟ.


"ಈಗೇನು ಅಂತ ಡಿಸೈಡ್ ಮಾಡಿದ್ರಾ?" ಉಷಾ ಕೇಳಿದಳು.


"ಹೂಂ... ಏನೂ ಬದಲಾಗಿಲ್ಲ. ನಾವು ಇಂಡಿಯಾಗೆ ಹೋಗೋದೆ ಬೆಸ್ಟ್ ಐಡಿಯಾ ಅಂತ ಇನ್ನೂ ಅನ್ನಿಸುತ್ತೆ. ಕಾನ್ಸುಲೇಟ್ ಮೂಲಕ ಹೋಗೋಕ್ಕೆ ಆಗದಿದ್ದರೆ ಬೇರೆ ದಾರಿ ನೋಡಬೇಕು"


"ಬೇರೆ ದಾರಿ?" ಸ್ವಲ್ಪ ಯೋಚಿಸಿ "ಪಾಸ್ಪೋರ್ಟ್? ಟಿಕೆಟ್?"


"ನಮ್ಮ ಒರೀಜಿನಲ್ ಪಾಸ್ಪೋರ್ಟ್ ಉಪಯೋಗಿಸೋಕ್ಕೆ ಆಗಲ್ಲ. ಡೂಪ್ಲಿಕೇಟ್ ಸಿಗೋಹಾಗಿಲ್ಲ, ಸಿಕ್ಕಿದರೂ ಅದರ ಮೇಲೆ ಪ್ರಯಾಣ ಮಾಡಕ್ಕೆ ಆಗೋಲ್ಲ, ಮೀನ್ವೈಲ್ ನಮ್ಮ ಅಕೌಂಟ್‍ಗಳ ಮೇಲೂ ಕಣ್ಣಿಟ್ಟಿರ್ತಾರೆ, ಅದನ್ನೂ ಉಪಯೋಗಿಸೋಕ್ಕೆ ಆಗಲ್ಲ. ಸೋ... ಆಲ್ಟರ್ನೇಟ್ ಫಂಡ್ಸ್, ಜೊತೆಗೆ ಬೇರೆ ಪಾಸ್ಪೋರ್ಟ್ ಹೊಂದಿಸಬೇಕು" ದಿವಾಕರ ವಿವರಿಸಿದ.


"ಬೇರೆ ಪಾಸ್ಪೋರ್ಟ್? ಆಲ್ಟರ್ನೇಟ್ ಫಂಡ್ಸ್? ನಿಮ್ಮ ವಿಷಯ ಗೊತ್ತಿಲ್ಲ, ಉಟ್ಟ ಬಟ್ಟೆಲೇ ಬಂದವಳು ನಾನು. ನನ್ನ ಹತ್ತಿರ ಆಲ್ಟರ್ನೇಟ್ ಫಂಡ್ಸ್ ಯಾವುದೂ...." ಉಷಾ ಮಾತು ಅರ್ಧದಲ್ಲಿಯೇ ನಿಂತು ಅವಳ ಕಣ್ಣು ವಾಶರ್ ಮೇಲಿಟ್ಟ ಹಣದ ಬ್ಯಾಗಿನ ಮೇಲೆ ಬಿತ್ತು. ದಿವಾಕರನ ಮಾತು ಅರ್ಥವಾಗಿ ಸಣ್ಣ ನಗೆ ನಕ್ಕಳು.


"ನೋಡೇ ಬಿಡೋಣ ಬಾ" ಎನ್ನುತ್ತ ಬ್ಯಾಗ್ ಹೆಗಲಮೇಲೇರಿಸಿ, ಬಾಗಿಲು ತೆಗೆದು ದಿವಾಕರ ಹೊರಟ.


***


ಸೆಲ್‍ಫೋನ್ ಸಿಗ್ನಲ್ ಹಿಡಿದೂ ಪೋಲೀಸ್ ಅವರನ್ನು ಹುಡುಕಬಹುದೆಂದು ತಿಳಿದು ಇಬ್ಬರೂ ತಮ್ಮ ಸೆಲ್‍ಫೋನ್‍ಗಳ ಬ್ಯಾಟರಿ ತೆಗೆದು ಅಲ್ಲೇ ಇದ್ದ ಟ್ರ್ಯಾಶ್‍ಕ್ಯಾನಿನಲ್ಲಿ ಬಿಸಾಡಿದರು. ಸುತ್ತಲೂ ಇದ್ದ ಪೋಲೀಸ್ ಪಹರೆಯಿಂದ ದೂರ ಹೋಗಬೇಕೆಂದು ಹತ್ತಿರದಲ್ಲೇ ಇದ್ದ ಗೋಲ್ಡನ್‍ಗೇಟ್‍ಪಾರ್ಕ್ ಒಳಗೆ ಹೊಕ್ಕಿ ನಡೆಯಲಾರಂಭಿಸಿದರು. ಬೆಳಗ್ಗೆ ೯:೩೦ ಘಂಟೆ ಸಮೀಪಿಸಿತ್ತು, ಶುಕ್ರವಾರವಾದ್ದರಿಂದ, ಪಾರ್ಕ್ ಒಳಗೆ ಜನಜಂಗುಳಿ ಹೆಚ್ಚೇನಿರಲಿಲ್ಲ. ಸ್ಟೋ ಲೇಕ್ ದಡದಮೇಲೆ ನಡೆಯುತ್ತ ಇಬ್ಬರೂ ತಮ್ಮ ಸೆಲ್‍ಫೋನ್‍ಗಳನ್ನು ನೀರಿನೊಳಕ್ಕೆಸೆದರು. ನಡೆದೇ ಹೋಗಿ ಲಿಂಕನ್‍ವೇ ಬಾಗಿಲಿನಿಂದ ಪಾರ್ಕನ್ನು ಬಿಟ್ಟು ಡೌನ್‍ಟೌನ್ ಕಡೆ ನಡೆಯಲಾರಂಭಿಸಿದರು. ಓಕ್‍ಸ್ಟ್ರೀಟ್, ಮಾರ್ಕೆಟ್‍ಸ್ಟ್ರೀಟ್‍ಗಳ ಮೂಲಕ ಲಾರ್ಕಿನ್‍ಸ್ಟ್ರೀಟ್‍ನಲ್ಲಿದ್ದ ಪಬ್ಲಿಕ್ ಲೈಬ್ರರಿ ಸೇರಿದರು.


ಟೋಪಿಯನ್ನು ಕಣ್ಣಿನವರೆಗಿಳಿಸಿಕೊಂಡು ದಿವಾಕರ ಉಷಾಳ ಹಿಂದೆ ಕಂಪ್ಯೂಟರ್‌ಗಳು ಇದ್ದಲ್ಲಿಗೆ ಹೋಗಿ ಕ್ರೈಗ್ಸ್‍ಲಿಸ್ಟ್ ವೆಬ್ಸೈಟಿನಲ್ಲಿ ಸ್ವಲ್ಪ ಹೊತ್ತು ಹುಡುಕಿದ. ಪಕ್ಕದಲ್ಲೇ ಇದ್ದ ಕಾಗದದ ಮೇಲೆ ಚೈನಾಟೌನ್ ಅಡ್ರಸ್ ಒಂದನ್ನು ಬರೆದುಕೊಂಡ. ಇಬ್ಬರೂ ಲೈಬ್ರರಿಯಿಂದ ಎದ್ದು ಹೊರಬಂದು ಚೈನಾಟೌನ್ ಕಡೆ ನಡೆಯಲಾರಂಭಿಸಿದರು. ಸುಮಾರು ಹದಿನೈದು ನಿಮಿಷಗಳು ನಡೆದ ನಂತರ ದಿವಾಕರ ಬರೆದುಕೊಂಡಿದ್ದ ಅಡ್ರಸ್ ಮುಂದೆ ಬಂದು ನಿಂತಾಗ ’ಮ್ಯಾಂಡರಿನ್ ಆರ್ಟ್’ ಎಂದು ಅಂಗಡಿಯ ಹೆಸರನ್ನು ಉಷಾ ಓದಿಕೊಂಡಳು.


ಇಬ್ಬರೂ ಅಂಗಡಿಯೊಳಗೆ ಹೋದರು. ಪುಟ್ಟ ಅಂಗಡಿ, ಹತ್ತಾರು ಪೇಂಟಿಂಗ್ ಮಾರಲು ಪ್ರದರ್ಶಿಸಲಾಗಿತ್ತು, ಗ್ರಾಹಕರಾರೂ ಇರಲಿಲ್ಲ. ಚೈನೀ ಮನುಷ್ಯನೊಬ್ಬ ಕೌಂಟರ್ ಹಿಂದೆ ಕೂತಿದ್ದ. ಗುಂಡು ಹೊಟ್ಟೆ, ನುಣ್ಣಗಿದ್ದ ತಲೆ, ಸುಮಾರು ೫೦ ವರ್ಷ, ಬಟ್ಟೆಗಳೆಲ್ಲ ಪೇಂಟ್ ಹಾರಿತ್ತು.


"ಪ್ಯಾಟ್ರಿಕ್ ಚಿನ್?" ದಿವಾಕರ ಕೇಳಿದ. "ಐ ಸಾ ಯೋರ್ ಆಡ್ ಇನ್ ಕ್ರೈಗ್ಸ್‍ಲಿಸ್ಟ್". ಕ್ರೈಗ್ಸ್‍ಲಿಸ್ಟ್ ಜಾಹೀರಾತಿನಲ್ಲಿ ಪ್ರಸಿದ್ಧ ಪೇಂಟಿಂಗ್‍ಗಳ ನಕಲುಗಳನ್ನು ಮಾಡಿ ಕೊಡುವುದಾಗಿ ಪ್ಯಾಟ್ರಿಕ್ ಬರೆದುಕೊಂಡಿದ್ದ. ಚೈನಾಟೌನ್‍ನಲ್ಲಿ ಆರ್ಟ್-ಕಾಫಿ ಮಾಡುವವರು ನಕಲಿ ಕಾಗದಪತ್ರಗಳನ್ನೂ ಮಾಡುತ್ತಾರೆಂದು ದಿವಾಕರ ಕೇಳಿದ್ದ. ಮೊದಲಿಗೆ ಪ್ಯಾಟ್ರಿಕ್ ನಕಲಿ ಪಾಸ್ಪೋರ್ಟ್ ಮಾಡುವುದಿಲ್ಲವೆಂದು ಆಕ್ಷೇಪ ಮಾಡಿದರು ಕೊನೆಗೆ ಇಬ್ಬರನ್ನೂ ಮಹಡಿಮೇಲಿದ್ದ ಕಿಟಕಿ ರಹಿತ ಸಣ್ಣ ಕೋಣೆಯೊಂದಕ್ಕೆ ಕರೆದೊಯ್ದ. ಒಂದು ಸ್ಕ್ರೀನ್ ಹಿಂದೆ ನೈಕಾನ್ ಡಿಜಿಟಲ್ ಕ್ಯಾಮರಾ ನಿಂತಿತ್ತು. ಪಕ್ಕದಲ್ಲಿ ಡಿಜಿಟೈಸಿಂಗ್ ಎಕ್ವಿಪ್ಮೆಂಟ್ ಜೋಡಿಸಿತ್ತು. ದಿವಾಕರ ಅವನ್ನು ಗಮನಿಸಿದ್ದನ್ನು ನೋಡಿ, ಪ್ಯಾಟ್ರಿಕ್ "ಹೊಸ ಪಾಸ್ಪೋರ್ಟುಗಳು ಡಿಜಿಟಲ್ ಆಗಿರುತ್ತವೆ. ವ್ಯಾಲ್ಯೂ ಫಾರ್ ಮನಿ. ಈಗ ಹೇಳು" ಎಂದ.


"ಎರಡು ಪಾಸ್ಪೋರ್ಟ್, ವಿತ್ ಇಂಡಿಯನ್ ವೀಸಾ, ಎರಡು ಪ್ರೀಪೇಡ್ ಕ್ರೆಡಿಟ್‍ಕಾರ್ಡ್, ಡ್ರೈವರ್ಸ್ ಲೈಸನ್ಸ್, ಟ್ರಾವಲಿಂಗ್ ಲಗೇಜ್, ಏರ್ ಟಿಕೆಟ್ಸ್"


ಪ್ಯಾಟ್ರಿಕ್ ಸ್ವಲ್ಪ ಹೊತ್ತು ಯೋಚಿಸಿ "ಟಿಕೆಟ್ಸ್ ನೀನು ಬುಕ್ ಮಾಡು, ಏಜೆಂಟ್ ನಂಬರ್ ಕೊಡ್ತೀನಿ. ಸೂಟ್ಕೇಸ್ ಕೊಡ್ತೀನಿ, ನೀನೇ ಅದರೊಳಗೆ ಸಾಮಾನು ತುಂಬಬೇಕು. ಎಲ್ಲ ಸೇರಿಸಿ ೧೮೦೦೦ ಡಾಲರ್. ಕ್ಯಾಶ್"


"೧೮೦೦೦? ತುಂಬಾ ಜಾಸ್ತಿ...?" ಉಷಾ ಚೌಕಾಸಿ ಮಾಡಲು ಪ್ರಯತ್ನಿಸಿದಳು.


ದಿವಾಕರ ಅವಳ ಕಡೆ ದುರ್ಗುಟ್ಟಿ, ಪ್ಯಾಟ್ರಿಕ್ ಕಡೆ ತಿರುಗಿ "ಡನ್. ಕ್ರೆಡಿಟ್‍ಕಾರ್ಡ್ ತಲಾ ೨೫೦೦ ಬ್ಯಾಲೆನ್ಸ್ ಇರಲಿ" ಎಂದ. ಪಕ್ಕ ಉಷಾಳಿಗೆ "ಈ ವಿಚಾರದಲ್ಲಿ ಚೌಕಾಶಿ ಮಾಡಬಾರದು" ಎಂದು ತಿಳಿಹೇಳಿದ.


ಪ್ಯಾಟ್ರಿಕ್ "ಕ್ರೆಡಿಟ್‍ಕಾರ್ಡ್ ಸೇರಿಸಿ ನಿನ್ನ ಬಿಲ್ ೨೩೦೦೦ ಡಾಲರ್ ಆಯಿತು" ಎಂದು, ಒಂದು ಪುಸ್ತಕವನ್ನು ನೋಡಿಕೊಂಡು "ನೀನು ಜಲೀಲ್ ಕಮಾಲಿ, ಈಜಿಪ್ಶಿಯನ್ ಸಿಟಿಝನ್ ಯುನೈಟೆಡ್ ನೇಶನ್ಸ್ ಅಧಿಕಾರಿ. ನಿನಗೆ ಯು.ಎನ್ ಪಾಸ್ಪೋರ್ಟ್ ವಿತ್ ಇಂಡಿಯನ್ ವೀಸಾ. ಆಕೆ ಅಚಲಾ ಪ್ರಧಾನ್, ನೇಪಾಲಿ ಓರಿಜಿನ್, ಕೆನೇಡಿಯನ್ ಪಾಸ್ಪೋರ್ಟ್, ವಿತ್ ವೀಸಾ ಟು ಇಂಡಿಯ. ಓಕೆ? ನಿಮ್ಮ ಬ್ಯಾಕ್‍ಗ್ರೌಂಡ್ ನೀವೇ ಯೋಚಿಸಿಕೊಳ್ಳಬೇಕು. ಬರ್ತ್‍ಡೇಟ್, ಇತ್ಯಾದಿ ಉರು ಹೊಡೆಯೋದು ಮರೀಬೇಡಿ. ಕಮಾನ್ ಒಬ್ಬೊಬ್ಬರಾಗಿ ನಿಂತ್ತುಕೊಳ್ಳಿ" ಎಂದು ಕ್ಯಾಮರಾ ಕಡೆ ತೋರಿಸಿದ.


ಇಬ್ಬರೂ ಕ್ಯಾಮರಾ ಹಿಂದೆ ನಿಂತು ಫೋಟೋ ತೆಗೆಸಿಕೊಂಡರು. ಎಲೆಕ್ಟ್ರಾನಿಕ್ ಪೆನ್‍ನಿಂದ ದಿವಾಕರ ’ಜಲೀಲ್ ಕಮಾಲಿ’ ಎಂದೂ, ಉಷಾ ’ಅಚಲಾ ಪ್ರಧಾನ್’ ಎಂದೂ ಸಹಿ ಮಾಡಿದರು. ನಂತರ ಪ್ಯಾಟ್ರಿಕ್ ಎರಡು ಹೊಸತೆನ್ನಿಸದ ದೊಡ್ಡ ಸೂಟ್ಕೇಸ್, ಜೊತೆಗೆ ಎರಡು ಹ್ಯಾಂಡ್ ಲಗೇಜ್, ಮತ್ತು ಒಂದು ಲ್ಯಾಪ್ಟಾಪ್ ಬ್ಯಾಗ್ ತರಿಸಿ ಕೊಟ್ಟ. "ಕ್ರೆಡಿಟ್‍ಕಾರ್ಡ್ ಒಂದು ಘಂಟೆಯೊಳಗೆ ತಯಾರಾಗುತ್ತೆ, ಪಾಸ್ಪೋರ್ಟ್ ಮಧ್ಯಾಹ್ನ ಸಿಗುತ್ತೆ. ಪ್ರಯಾಣಕ್ಕೆ ಬೇರೆ ಬಟ್ಟೆ ಹಾಕಿಕೊಳ್ಳಿ. ಪಾಸ್ಪೋಟ್ ಫೋಟೋ ಇರೋ ಬಟ್ಟೇಲೇ ಪ್ರಯಾಣ ಮಾಡಿದರೆ ಸಂದೇಹ ಬರುತ್ತೆ" ಎಂದು ಹೇಳಿದ.


ಇಬ್ಬರಿಗೂ ಪಾಸ್ಪೋರ್ಟ್ ತಯಾರಾಗುವವರೆಗೆ ಇರಲು ಮೂರನೆಯ ಮಹಡಿಯ ಮೇಲಿದ್ದ ಒಂದು ಸಣ್ಣ ರೂಂ ಬಿಟ್ಟುಕೊಟ್ಟ. ರೂಮಿನೊಳಗೆ ಒಂದು ಬಾತ್‍ರೂಮ್, ಜೊತೆಗೆ ಫೋನ್ ಇದ್ದವು. ಉಷಾ ಬಾತ್‍ರೂಮ್ ಸೇರಿಕೊಂಡಳು, ದಿವಾಕರ ಅಲ್ಲಿದ್ದ ಮಂಚದ ಮೇಲೆ ಕಾಲು ಚಾಚಿ ಮಲಗಿದ. ಮೆಲ್ಲನೆ ಪಕ್ಕೆಯಲ್ಲಿ ನೋವು ಶುರುವಾದಾಗ ಪೋಲೀಸ್ ಆಫೀಸರ್ ಒದ್ದದ್ದು ನೆನಪಾಯಿತು. ಎದ್ದು, ಶರ್ಟ್ ತೆಗೆದು ಕನ್ನಡಿಯಲ್ಲಿ ತನ್ನ ಮೈಮೇಲಾಗಿದ್ದ ರಕ್ತ ಒಣಗಿದ ಜೆಜ್ಜುಗಾಯಗಳನ್ನು ನೋಡಿಕೊಳ್ಳುತ್ತಿದ್ದಂತೆ ಉಷಾ ಬಾತ್‍ರೂಮಿನಿಂದ ಹೊರಗೆ ಬಂದಳು. ಆಕೆಯ ಕಣ್ಣು ದಿವಾಕರನ ಗಾಯಗಳ ಮೇಲೆ ಬಿದ್ದಾಗ ಅವಳು ಸೀಕಾರ ಎಳೆದು ಅವನ ಹತ್ತಿರ ಹೋದಳು. "ಇಷ್ಟೊಂದು ಗಾಯಗಳು...?" ಎಂದು ಕೇಳಿದಳು


ದಿವಾಕರ "ಹೂಂ" ಎಂದು ಗುರ್ಗುಟ್ಟಿದ. ಉಷಾ ಅವನ ಬಳಿ ಬಂದು ಹತ್ತಿರದಿಂದ ಗಾಯಗಳನ್ನು ಪರೀಕ್ಷಿಸಿದಳು. "ಹಚ್ಚೋಕ್ಕೆ ಔಷಧಿಯಂತೂ ಇಲ್ಲ ಮೊದಲು ಬಿಸಿ ನೀರಿನಲ್ಲಿ ಕ್ಲೀನ್ ಮಾಡ್ತೀನಿ, ಆಮೇಲೆ ನನ್ನ ಬ್ಯಾಗಲ್ಲಿ ಟೈಲೆನಾಲ್ ಇದೆ ಒಂದೆರಡು ನುಂಗಿ. ಹೊರಗೆ ಹೋದಾಗ ಆಯಿಂಟ್ಮೆಂಟ್ ತರ್ತೀನಿ" ಅವಳ ಕಣ್ಣುಗಳಲ್ಲಿ ಕಣ್ಣೀರು ತೇಲುತ್ತಿತ್ತು. ಅವಳ ಅನುಕಂಪ, ಸುಶ್ರೂಶೆ ಕಂಡು ದಿವಾಕರ ಆಶ್ಚರ್ಯದಿಂದ ’ನನ್ನ ಮೇಲೆ ಸದಾ ಕೋಪ ಮಾಡಿಕೊಂಡಿರುತ್ತಿದ್ದವಳು ಇವಳೇಯೇ?’ ಎಂದು ಯೋಚಿಸುತ್ತ ಅವಳು ಬಾತ್‍ರೂಮಿಗೆ ಹೋಗುವುದನ್ನೇ ನೋಡುತ್ತಿದ್ದ.


ಕೆಲ ಕ್ಷಣಗಳ ನಂತರ ಉಷಾ ಒಂದು ಬಿಳಿಯ ಒದ್ದೆ ಟವಲ್ ಹಿಡಿದು ಹೊರಗೆ ಬಂದಳು. ದಿವಾಕರನನ್ನು ಮಂಚದ ಮೇಲೆ ಕೂರಿಸಿ ಗಾಯಗಳನ್ನು ಒರೆಸತೊಡಗಿದಳು. ದಿವಾಕರ ಟವಲ್ಲಿನ ಶಾಖ, ಉರಿಯಿಂದ ಸೀವರಿಸಿದಾಗ "ಸಾರಿ" ಎಂದು ಮುಂದುವರೆಸಿದಳು. "ಇದಕ್ಕೆ ಬರಿ ಆಯಿಂಟ್ಮೆಂಟ್ ಸಾಲೋದಿಲ್ಲ. ಕೋಲ್ಡ್‍ಕಾಂಪ್ರೆಸ್ ಏನಾದರೂ ಹಾಕಬೇಕು. ಏನಾದರು ಮೂಳೆ ಮುರಿದಿದೆ ಅನ್ನಿಸುತ್ತಿದೆಯಾ?" ಎಂದಳು.


ಅವಳನ್ನೇ ದಿಟ್ಟಿಸಿ ನೋಡುತ್ತಿದ್ದ ದಿವಾಕರ ಇಲ್ಲವೆಂದು ತಲೆಯಾಡಿಸಿದ. ಅವಳು ತೋರಿಸುತ್ತಿದ್ದ ಪ್ರೀತಿ ಅವನಿಗೆ ಹೊಸತೆನ್ನಿಸಿದರೂ ಹಳೆಯ ಸಂತೋಷದ ಸಮಯಗಳ ನೆನಪುಗಳು ಒಂದರ ಮೇಲೊಂದು ಬರಹತ್ತಿದವು. ಗಂಟಲು ದಪ್ಪವಾದಂತೆ ಭಾಸವಾಗಿ ಮಾತು ಹೊರಡಲಿಲ್ಲ. ಅವಳ ಕೈಗಳನ್ನು ತನ್ನ ಕೈಗಳಲ್ಲಿ ಬಂಧಿಸಿ ಅವಳನ್ನು ತನ್ನ ಮೇಲೆ ಸೆಳೆದು ಅಪ್ಪಿಕೊಂಡನು. ಮೌನದಲ್ಲಿಯೇ ಇಬ್ಬರ ಮಧ್ಯೆ ನೂರಾರು ಮಾತುಗಳಾಗಿಹೋದವು.


ಆ ಸಮಯಕ್ಕೆ ಸರಿಯಾಗಿ ಫೋನ್ ಮೊಳಗಿತು. ರಿಸೀವರ್ ಕೈಗೆತ್ತಿಕೊಂಡಾಗ, ಪ್ಯಾಟ್ರಿಕ್ "ಕ್ರೆಡಿಟ್‍ಕಾರ್ಡ್ ರೆಡಿ" ಎಂದ. ಅವನು ಹೇಳಿದ ಕ್ರೆಡಿಟ್‍ಕಾರ್ಡ್ ನಂಬರ್, ಟ್ರಾವಲ್ ಏಜೆಂಟ್ ಫೋನ್ ನಂಬರ್, ಜೊತೆಗೆ ನಕಲಿ ಪಾಸ್ಪೋರ್ಟ್ ನಂಬರ್‌ಗಳನ್ನು ದಿವಾಕರ ಪಕ್ಕದಲ್ಲಿದ್ದ ರೈಟಿಂಗ್‍ಪ್ಯಾಡ್ ಮೇಲೆ ಬರೆದುಕೊಂಡ.


ಟ್ರಾವಲ್ ಏಜೆಂಟ್‍ಗೆ ಫೋನ್ ತಿರುಗಿಸಿ, ಹೊಸ ಕ್ರೆಡಿಟ್‍ಕಾರ್ಡ್ ನಂಬರ್ ಕೊಟ್ಟು, ದಿವಾಕರ ಎರಡು ಟಿಕೆಟ್ ಬುಕ್ ಮಾಡಿದ. ಒಂದು ಅಚಲಾ ಪ್ರಧಾನ್ ಹೆಸರಿನಲ್ಲಿ, ಅಮೇರಿಕನ್ ಏರ್ಲೈನ್ಸ್‍ನಲ್ಲಿ ಓಕ್‍ಲ್ಯಾಂಡ್ ಇಂಟರ್ನ್ಯಾಶನಲ್‍ನಿಂದ ಡ್ಯಾಲಸ್, ನಂತರ ಡ್ಯಾಲಸ್‍ನಿಂದ ಎಮಿರೇಟ್ಸ್ ಏರ್ಲೈನ್ಸ್‍ನಲ್ಲಿ ಡ್ಯಾಲಸ್-ಲಂಡನ್-ದುಬೈ ಮೂಲಕ ಬೆಂಗಳೂರಿಗೆ. ಮತ್ತೊಂದು ಜಲೀಲ್ ಕಮಾಲಿ ಹೆಸರಿನಲ್ಲಿ ಲುಫ್ತಾನ್ಸಾದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಫ್ರಾಂಕ್‍ಫರ್ಟ್ ಮೂಲಕ ದುಬೈ. ದುಬೈ‍ನಿಂದ ಉಷಾಳ ಜೊತೆಗೆ ಎಮಿರೇಟ್ಸ್ ಏರ್ಲೈನ್ಸ್‍ನಲ್ಲಿ ಬೆಂಗಳೂರಿಗೆ. ಹೀಗೆ, ಇಬ್ಬರೂ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಷ್ಟೇ ಅಲ್ಲಿ, ತಾನು ಸಿಕ್ಕಿಬಿದ್ದರೆ ಕನಿಷ್ಠ ಉಷಾಳಾದರೂ ಊರು ತಲುಪಬಲ್ಲಳು ಎಂದು ಯೋಚಿಸಿದ. ಅದೇ ಕಾರಣಕ್ಕಾಗಿ ಸಂಜೆ ೬:೦೦ಕ್ಕೆ ಉಷಾಳ ಫ್ಲೈಟ್ ಹೊರಡುವುದಿತ್ತು, ರಾತ್ರೆ ೨:೦೦ಕ್ಕೆ ತನ್ನದು ಬುಕ್ ಮಾಡಿದ್ದ. ಉಷಾ ಬೇಗನೆ ದುಬೈ ತಲುಪಿ ಅಲ್ಲಿ ನಾಲ್ಕು ಘಂಟೆಗಳ ಕಾಲ ಕಾಯುವುದಿತ್ತು.


ಘಂಟೆ ೧೧:೦೦ ದಾಟಿತ್ತು. ಇಬ್ಬರೂ ಪುನಃ ಹೊರಗೆ ಹೋದರು. ಹೊಟ್ಟೆ ಕಾದಿತ್ತು, ಬರ್ಗರ್‌ಕಿಂಗ್‍ನಲ್ಲಿ ತಿಂಡಿ ತಿಂದುಕೊಂಡು ದಿವಾಕರ ೨ ಟೈಲೆನಾಲ್ ನುಂಗಿ ಡಬ್ಬವನ್ನು ತನ್ನ ಜೇಬಿನಲ್ಲಿರಿಸಿಕೊಂಡ. ನಂತರ ಸ್ಯಾಲ್ವೇಶನ್ ಆರ್ಮಿ ಮತ್ತು ಗುಡ್ವಿಲ್ ಥ್ರಿಫ್ಟ್‍ಸ್ಟೋರ‍್ಗಳಿಗೆ ಹೋಗಿ ಅವರಿಗೆ ಹಿಡಿಸುವಂತಹ ಸೆಕೆಂಡ್‍ಹ್ಯಾಂಡ್ ಬಟ್ಟೆಗಳನ್ನು ಕೊಂಡರು. ಅವನ್ನು ಕಂಡು ಉಷಾ ಮೂಗು ಸುಕ್ಕುಮಾಡಿದಾಗ "ಬರಿ ಹೊಸ ಬಟ್ಟೆ ಕೊಂಡರೆ ಅಥವ ಖಾಲಿ ಸೂಟ್ಕೇಸ್ ತೊಗೊಂಡು ಹೋದರೆ ಅನುಮಾನ ಬರುತ್ತೆ. ಅದಕ್ಕೆ ಹಳೆ ಬಟ್ಟೆ ಇಟ್ಟುಕೊಳ್ಳಬೇಕು. ಊರಿಗೆ ಹೋದ ಮೇಲೆ ಎಸೆದರಾಯಿತು" ಎಂದು ದಿವಾಕರ ಹೇಳಿದ.


ನಂತರ ಉಷಾ ಹತ್ತಿರವಿದ್ದ ರೈಟ್‍ಏಡ್ ಫಾರ್ಮಸಿಗೆ ಹೋಗಿ ದಿವಾಕರನ ಗಾಯಗಳಿಗೆ ಔಷಧಿ, ಹಾಗು ಹಲವು ಪ್ಯಾಕೆಟ್ ಚಾಕ್ಲೇಟ್, ಪರ್ಫ್ಯೂಮ್, ಇತ್ಯಾದಿಗಳನ್ನು ತಂದಳು. "ಅಮೇರಿಕಾದಿಂದ ಹೋಗೋರು ಇಂತಹ ವಸ್ತು ತೊಗೊಂಡು ಹೋಗೋದು ಸಾಮಾನ್ಯ. ಇವೆಲ್ಲ ಇದ್ದರೆ ಅನುಮಾನ ಬರೋಲ್ಲ" ಎಂದು ದಿವಾಕರ ಹೇಳಿದ. ಕೊನೆಗೆ ಇಬ್ಬರೂ ಗ್ಯಾಪ್ ಶೋರೂಮಿಗೆ ಹೋಗಿ ಹೊಸ ಬಟ್ಟೆಗಳನ್ನು ಕೊಂಡು, ಅವುಗಳನ್ನೇ ಧರಿಸಿ ಅಂಗಡಿಯಿಂದ ಹೊರಬಂದರು. ಎಲ್ಲ ವ್ಯವಹಾರವನ್ನೂ ನಗದು ಕೊಟ್ಟೇ ಮುಗಿಸಿದರು.


ಘಂಟೆ ೧೨:೦೦ ಆಗಿತ್ತು. ಪ್ಯಾಟ್ರಿಕ್ ಚಿನ್ ಅಂಗಡಿಗೆ ಹಿಂತಿರುಗಿದರು. ಅಲ್ಲಿ ಇಬ್ಬರ ಹೊಸ ಪಾಸ್ಪೋರ್ಟ್ ಮತ್ತಿತರ ಕಾಗದಪತ್ರಗಳು ತಯಾರಾಗಿದ್ದವು. ದಿವಾಕರನ ಫೋಟೋ ಪಕ್ಕ "ಜಲೀಲ್ ಕಮಾಲಿ" ಎಂಬ ಹೆಸರುಳ್ಳ ತಿಳಿ ನೀಲಿ ಬಣ್ಣದ ಯು.ಎನ್. ಪಾಸ್ಪೋರ್ಟ್, ಉಷಾಳ ಫೋಟೋ ಪಕ್ಕ ’ಅಚಲಾ ಪ್ರಧಾನ್’ ಎಂಬ ಹೆಸರುಳ್ಳ ಕರಿ ಕೆನೇಡಿಯನ್ ಪಾಸ್ಪೋರ್ಟ್ ಎರಡನ್ನೂ ಅದೇ ಹೆಸರುಗಳುಳ್ಳ ಕ್ರೆಡಿಟ್‍ಕಾರ್ಡ್, ಡ್ರೈವರ್ಸ್ ಲೈಸನ್ಸ್ ಸಮೇತ ಪ್ಯಾಟ್ರಿಕ್ ದಿವಾಕರನ ಕೈಗೆ ಕೊಟ್ಟನು. ಜೊತೆಗೆ ದಿವಾಕರ ಒಂದಿಷ್ಟು ಪೇಪರ್, ಒಂದು ಪೆನ್, ಹಾಗು ಒಂದು ರೊಟ್ಟಿನ ಡಬ್ಬವನ್ನು ಕೇಳಿ ಪಡೆದುಕೊಂಡನು.


ರೂಮಿಗೆ ಹೋದಾಗ, ಹಣದ ಬ್ಯಾಗಿನಿಂದ ೨೬೦೦೦ ಡಾಲರ್ ಎಣಿಸಿ ತೆಗೆದು ಪಕ್ಕಕ್ಕಿಟ್ಟು, ದಿವಾಕರ ಉಳಿದದ್ದನ್ನು ಡಬ್ಬದೊಳಕ್ಕೆ ಹಾಕ ತೊಡಗಿದ. ಒಟ್ಟು ಒಂದು ಮಿಲಿಯನ್ ಡಾಲರ್ ಇರುವುದನ್ನು ಎಣಿಸಿದ. ಪುನಃ ಕೆಳಗಿಳಿದು ಹೋಗಿ ಪ್ಯಾಟ್ರಿಕ್‍ಗೆ ಅವನ ಹಣ ಕೊಟ್ಟು ಬಂದು, "ಕ್ರೆಡಿಟ್‍ಕಾರ್ಡ್ ಇದ್ದೇ ಇದೆ, ಆದರೂ ಎಮರ್ಜೆನ್ಸಿ ಫಂಡ್ಸ್" ಎಂದು ಉಷಾಳ ಕೈಗೆ ೧೫೦೦ ಡಾಲರ್ ಕೊಟ್ಟ. ಉಳಿದ ೧೫೦೦ ಡಾಲರ್ ತಾನಿಟ್ಟುಕೊಂಡ.


ಉಷಾಳ ಪಕ್ಕ ಕೂತು "ನೀನು ಸ್ವಲ್ಪ ಹೊತ್ತು ರೆಸ್ಟ್ ತೊಗೊ" ಎಂದು ಹೇಳಿ ಕಾಗದ ಪೆನ್ನು ಕೈಗೆತ್ತಿಕೊಂಡು ಬರೆಯಲಾರಂಭಿಸಿದ. ಸುಸ್ತಾಗಿದ್ದ ಉಷಾ ಮಲಗಿ ಏಳುವ ಹೊತ್ತಿಗೆ ಘಂಟೆ ೨:೦೦ ಆಗಿತ್ತು. ದಿವಾಕರ ಆಗಲೆ ೫-೬ ಹಾಳೆ ಬರೆದಿರುವುದನ್ನು ಗಮನಿಸಿದಳು. ಏನೆಂದು ಕೇಳಲು "ಮಿಲ್ಪೀಟಸ್ ಪೋಲೀಸ್ ಚೀಫ್‍ಗೆ ನಡೆದಿದ್ದೆಲ್ಲಾ ವಿವರಿಸಿ ಬರೆದಿದ್ದೇನೆ. ನಾನು ಹೊರಡೋಕ್ಕೆ ಮುಂಚೆ ಇದನ್ನ ದುಡ್ಡಿನ ಬಾಕ್ಸ್ ಜೊತೆ ಪೋಸ್ಟ್ ಮಾಡ್ತೀನಿ. ಏನಾಗುತ್ತೋ ಆಗಲಿ" ಎಂದು ತನ್ನ ಪತ್ರವನ್ನು ಹಣವಿದ್ದ ಡಬ್ಬದೊಳಗೆ ಹಾಕಿ ಸೀಲ್ ಮಾಡಿದ.


೨:೩೦ಗೆ ಚೈನಟೌನ್ ಬಿಟ್ಟು ಇಬ್ಬರೂ ಲಗೇಜ್ ಮತ್ತು ಹಣವಿದ್ದ ಡಬ್ಬವನ್ನೆತ್ತಿಕೊಂಡು ಪೋವೆಲ್‍ಸ್ಟ್ರೀಟ್ ಬಾರ್ಟ್ ಸ್ಟೇಶನ್‍ಗೆ ಹೋದರು. ಅಲ್ಲಿ ಬಾರ್ಟ್ ಹತ್ತಿ ಓಕ್‍ಲ್ಯಾಂಡ್ ಇಂಟರ್ನ್ಯಾಶನಲ್ ಏರ್ಪೊರ್ಟ್ ಕಡೆ ಹೊರಟರು.


***


ಓಕ್‍ಲ್ಯಾಂಡ್ ಇಂಟರ್ನ್ಯಾಶನಲ್‍ನಲ್ಲಿ ಚೆಕಿನ್ ಮಾಡುವ ಸಮಯ ಬಂದಾಗ ದಿವಾಕರನಿಗೆ ಆತಂಕ ಹುಟ್ಟಿತ್ತು. "ನೀವು ಇಲ್ಲೇ ಇರಿ, ನಾನು ಚೆಕಿನ್ ಮಾಡ್ತೀನಿ. ಪಾಸ್ಪೋರ್ಟ್ ಹೆಚ್ಚು ಕಡಿಮೆಯಾದರೆ ನೀವು ನಿಲ್ಲಬೇಡಿ ತಪ್ಪಿಸಿಕೊಂಡು ಬೇರೆ ಏನಾದರು ಪ್ರಯತ್ನ ಮಾಡಿ" ಎಂದು ಹೇಳಿ ಉಷಾ ಚೆಕಿನ್ ಮಾಡಿಕೊಳ್ಳಲು ಹೋದಳು.


ಉಷಾಳ ಚೆಕಿನ್ ಸರಾಗವಾಗಿ ಆಯಿತು. ಬೋರ್ಡಿಂಗ್ ಪಾಸ್ ಹಿಡಿದು ಕಿರುನಗೆ ನಗುತ್ತ ದಿವಾಕರ ನಿಂತಿದ್ದಲ್ಲಿಗೆ ಬಂದಳು. "ಲಗೇಜ್ ಬೆಂಗಳೂರಿಗೆ ಚೆಕಿನ್ ಮಾಡಿದ್ದಾರೆ" ಎಂದಳು. ಇಬ್ಬರೂ ಕೈ ಹಿಡಿದು ಅಕ್ಕ-ಪಕ್ಕ ಕೂತಿದ್ದರು. ಇಬ್ಬರ ಮನಸ್ಸಿನಲ್ಲೂ ’ಮತ್ತೆ ಒಬ್ಬರನ್ನೊಬ್ಬರು ನೋಡುತ್ತೀವಿಯೇ? ಹಳೆಯ ಪ್ರೀತಿ ಮತ್ತೆ ಮೂಡುವಷ್ಟರೊಳಗೆ ಹೀಗಾಯಿತೇ?’ ಎಂಬ ಚಿಂತನೆಗಳು ಓಡುತ್ತಿದ್ದವು. ಹಾಗೆ ಒಂದು ಘಂಟೆ ಘಟಿಸಿತು. ೫:೩೦ಯಷ್ಟು ಹೊತ್ತಿಗೆ ಉಷಾ ಎದ್ದು ಸೆಕ್ಯೂರಿಟಿ ಚೆಕ್‍ಗೆ ಹೊರಟಳು.


ದಿವಾಕರ ಉಷಾಳ ಕೈಗಳನ್ನು ತನ್ನೆದೆಗೆ ಒತ್ತಿಕೊಂಡು ದುಃಖದ ನಗೆ ಬೀರಿ, "ಮತ್ತೆ ನೋಡುತ್ತೀವೋ ಇಲ್ಲವೋ. ಏನಾದರೂ ಹೆಚ್ಚು ಕಡಿಮೆಯಾದರೆ ಸಾರಿ ಬಿಟ್ಟು ಬೇರೇನೂ ಹೇಳಲಾರೆ. ನನ್ನ ಮನಸ್ಸಿನಲ್ಲಿ ಕೊನೆಯವರೆಗೂ ನೀನು ಇರ್ತೀಯ" ಎಂದ. ಉಷಾಳ ಮನಸ್ಸೂ ಭಾವಪರವಶವಾಗಿಹೋಗಿತ್ತು. ದಿವಾಕರನ ಎದೆಯ ಮೇಲೆ ತಲೆಯಿಟ್ಟು ಗಂಟಲಲ್ಲಿ ನಿಂತಿದ್ದ ಗೆಡ್ಡೆಯನ್ನು ನುಂಗಿ "ಖಂಡಿತ ಮತ್ತೆ ನೋಡ್ತೀವಿ. ಐ ಲವ್ ಯು" ಎಂದಳು.


ಉಷಾ ಸೆಕ್ಯೂರಿಟಿ ಚೆಕ್ ಪಾಸ್ ಮಾಡಿಕೊಂಡು ಮುಂದೆ ಹೋಗುವವರೆಗೂ ದಿವಾಕರ ಕಾದು ನೋಡುತ್ತಿದ್ದ. ನಂತರ ತನ್ನ ಕೆಲಸಕ್ಕೆ ಹೊರಟ.


ಪುನಃ ಬಾರ್ಟ್ ಹತ್ತಿ ಪೋವೆಲ್‍ಸ್ಟ್ರೀಟ್‍ಗೆ ಆಗಮಿಸಿದ. ಬಾರ್ಟ್ ಸ್ಟೇಶನ್ ಒಳಗೇ ಯು.ಪಿ.ಎಸ್ ಮೂಲಕ ಹಣದ ಡಬ್ಬವನ್ನು ’ಸ್ಟೇಶನರಿ’ ಎಂದು ಹೇಳಿ ’ಗ್ರೌಂಡ್ ಶಿಪ್ಪಿಂಗ್’ ಮೂಲಕ ಮಿಲ್ಪೀಟಸ್ ಪೋಲೀಸ್ ಹೆಡ್‍ಕ್ವಾರ್ಟರ್ಸ್‍ಗೆ ಕಳುಹಿಸಿದ. ಮತ್ತೆ ಬಾರ್ಟ್ ಟ್ರೈನ್ ಹತ್ತಿ ಸ್ಯಾನ್ ಫ್ರಾನ್ಸಿಸ್ಕೋ ಇಂಟರ್ನ್ಯಾಶನಲ್ ಏರ್ಪೋರ್ಟ್ ಕಡೆ ಹೊರಟ. ಏರ್ಪೊಟ್ ಸೇರುವಷ್ಟು ಹೊತ್ತಿಗೆ ಘಂಟೆ ಸುಮಾರು ೮:೦೦ ಆಗಿತ್ತು. ಬಾತ್ ರೂಮಿಗೆ ಹೋಗಿ ಮುಖ ತೊಳೆದು ಫುಡ್ ಕೋರ್ಟ್‍ನಲ್ಲಿ ಹೊಟ್ಟೆ ಪೂಜೆ ಮಾಡಿಕೊಂಡ. ರೆಸ್ಟೋರಾಂಟ್‍ನಲ್ಲಿ ಟಿವಿ ನ್ಯೂಸ್‍ನಲ್ಲಿ ತನ್ನ ಸುದ್ಧಿ ಕಡಿಮೆಯಾಗಿದ್ದರೂ ಗ್ರೇಟ್‍ಮಾಲಿನ ಘಟನೆಯ ಸಮಾಚಾರ ಬರುತ್ತಲೇಯಿತ್ತು. ಗಾಯಗೊಂಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದು, ಸೆಲ್ ಫೋನುಗಳಲ್ಲಿ ತೆಗೆದ ಫೋಟೋ, ವಿಡಿಯೋಗಳನ್ನು ತೋರಿಸುತ್ತಿದ್ದದ್ದಲ್ಲದೆ ಅಲ್ಲಿದ್ದ ಜನರ ಸಂದರ್ಶನಗಳನ್ನೂ ಮಾಡುತ್ತಿದ್ದರು. ಯಾವುದಕ್ಕೂ ಹೆಚ್ಚು ಕಿವಿ ಕೊಡದೆ ದಿವಾಕರ ತಲೆಬಗ್ಗಿಸಿ ಊಟ ಮುಗಿಸಿದ. ಹೆಚ್ಚುತ್ತಿದ್ದ ನೋವಾರಿಸಿಕೊಳ್ಳಲು ಮತ್ತೆರಡು ಟೈಲೆನಾಲ್ ನುಂಗಿ, ಗುಳಿಗೆಯ ಡಬ್ಬವನ್ನು ಟ್ರ್ಯಾಶ್‍ಕ್ಯಾನಿನೊಳಗೆಸೆದ.


೧೧:೦೦ ಘಂಟೆಗೆ ಚೆಕಿನ್ ಕೌಂಟರ್‌ಗೆ ಹೋಗಿ ಚೆಕಿನ್ ಮಾಡಿಕೊಂಡಾಗ ಯಾವ ತೊಂದರೆಯೂ ಇಲ್ಲದೆ ಕಾರ್ಯ ಮುಗಿದದ್ದು ದಿವಾಕರನಿಗೆ ಆಶ್ಚರ್ಯವೇ ಆಯಿತು. ಅದನ್ನೇ ಒಳ್ಳೆ ಸಂಕೇತವೆಂದು ಭಾವಿಸಿ ಸೆಕ್ಯೂರಿಟಿ ಚೆಕ್ ಕಡೆ ಹೊರಟ. ಸೆಕ್ಯೂರಿಟಿ ಚೆಕ್‍ನಲ್ಲಿ ಪಕ್ಕಕ್ಕೆಳೆದಾಗ ದಿವಾಕರನ ಎದೆ ವೇಗವಾಗಿ ಹೊಡೆದುಕೊಳ್ಳುತ್ತಿತ್ತು. ಆದರೆ ಅದು ಕೇವಲ ’ರ‍್ಯಾಂಡಮ್ ಚೆಕ್’ ಆಗಿದ್ದು ’ಥ್ಯಾಂಕ್ಯೂ ಸರ್’ ಎಂದು ಹೇಳಿ ಅವನನ್ನು ಬಿಟ್ಟರು. ಪ್ರಸಂಗರಹಿತವಾಗಿ ಏರ್‌ಪ್ಲೇನ್ ಹತ್ತಿ, ಫ್ರಾಂಕ್‍ಫರ್ಟ್ ಮೂಲಕ ದುಬೈ ಸೇರಿದ. ದುಬೈ ಏರ್ಪೊಟ್‍ನಲ್ಲಿ ಕಾದಿದ್ದ ಉಷಾಳನ್ನು ನೋಡಿ ಮುನ್ನಡೆಯಲಾಗದೆ ಭಾವೋದ್ವಾಗದಿಂದ ನಿಂತಲ್ಲೇ ಕೂತುಬಿಟ್ಟ. ಉಷಾಳ ಮುಖದಲ್ಲಿ ಸಂತೋಷ ತುಂಬಿತ್ತು. ದಿವಾಕರನ ಕೆನ್ನೆಯನ್ನು ಸವರಿ ಅವನ ಕೈ ಹಿಡಿದು ಅಲ್ಲೇ ಇದ್ದ ಕುರ್ಚಿಯ ಮೇಲೆ ಕೂರಿಸಿದಳು. "ಅಲ್ಲಿ ನೋಡಿ" ಎಂದು ಓಡುತ್ತಿದ್ದ ಟಿವಿಯ ಕಡೆ ಸನ್ನೆ ಮಾಡಿದಳು. ಸಿ.ಎನ್.ಎನ್ ನ್ಯೂಸ್ ಬರುತ್ತಿತ್ತು.


"ದ ಸಸ್ಪೆಕ್ಟ್ ಇನ್ ದ ಗ್ರೇಟ್‍ಮಾಲ್ ಟೆರರಿಸ್ಟ್ ಅಟ್ಯಾಕ್ ಇಸ್ ಟುಡೇ ಬೀಯಿಂಗ್ ಹೈಲ್ಡ್ ಎ ಹಿರೋ" ಎಂದು ನ್ಯೂಸ್‍ಕ್ಯಾಸ್ಟರ್ ಹೇಳುತ್ತಿದ್ದಳು. ಮುಂದುವರೆಸಿ ದಿವಾಕರನ ಜೊತೆಯಿದ್ದ, ಆಪೀಸರ್ ಪೇನ್‍ನಿಂದ ಗುಂಡೇಟು ತಿಂದ ನೈಕಿ ಔಟ್ಲೆಟ್ ಕ್ಲರ್ಕ್ ಇನ್ನೂ ಬದುಕಿರುವುದಾಗಿ, ಅವಳ ಹೇಳಿಕೆಯ ಮೇಲೆ ಆಪೀಸರ್ ಪೇನ್ ಟೆರರಿಸ್ಟ್‍ಗಳ ಜೊತೆ ಒಳಗೊಂಡಿರುವುದು, ಅವನು ದಿವಾಕರನ ಮೇಲೆ ಮಾಡಿದ ದಾಳಿ, ಕ್ಲರ್ಕ್‍ಗೆ ಹೊಡೆದ ಗುಂಡೇಟು, ಅದಕ್ಕೆ ಮುಂಚೆ ಆತಂಕವಾದಿಗಳೊಂದಿಗೆ ದಿವಾಕರನ ಹೋರಾಟ, ನಂತರ ದಿವಾಕರ ಮಿಲ್ಪೀಟಸ್ ಪೋಲೀಸ್‍ಗೆ ಕಳಿಸಿದ ಪ್ಯಾಕೇಜ್  ಎಲ್ಲವೂ ಒಂದೊಂದಾಗಿ ಹೊರಬಂತು. ದಿವಾಕರನ ಹೆಗಲು ಅಪಾರಭಾರವೊಂದನ್ನು ಕೆಳಗಿಟ್ಟಂತೆ ಸುಸ್ತಿನಿಂದ ಇಳಿಯಿತು. ನಿಟ್ಟುಸಿರು ಬಿಡುತ್ತ ಕುರ್ಚಿಗೆ ಒರಗಿದ.


"ಮೂರು ಘಂಟೆಗಳಿಂದ ಮೇಲೆ ಮೇಲೆ ಇದೇ ನ್ಯೂಸ್ ಬರ್ತಾ ಇದೆ. ವಿಚಾರ ಎಲ್ಲಾರಿಗೂ ಗೊತ್ತಾತಿರುತ್ತೆ" ಎಂದಳು ಉಷಾ.


ದಿವಾಕರ ಸ್ವಲ್ಪ ಹೊತ್ತು ಮೌನವಾಗಿಯೇ ಇದ್ದ. ನಂತರ ಉಷಾಳ ಕೈಮೇಲೆ ತನ್ನ ಕೈ ಇರಿಸಿದ. ಕಣ್ಣುಗಳ ತುದಿಯಲ್ಲಿ ಆನಂದಭಾಷ್ಪ ತುಂಬಿದ್ದ ಮುಖವನ್ನು ಉಷಾ ಅವನೆಡೆ ತಿರುಗಿಸಿದಳು. "ಈಗೇನು ಮಾಡೋಣ? ಹಿಂತಿರುಗಿ ಯು.ಎಸ್‍ಗೋ, ಅಥವ ಇಂಡಿಯಾಗೋ?" ಎಂದು ಕೇಳಿದ. ಉಷಾ "ವಿತ್ ಯು, ಎನಿವೇರ್" ಎನ್ನುತ್ತ ಅವನ ತೋಳಿಗೆ ಒರಗಿದಳು; ದಿವಾಕರ ಅವಳ ಸುತ್ತ ಕೈ ಬಳಸಿದ.