Wednesday, September 24, 2014

ವಿಪರ್ಯಯ

ವಿಪರ್ಯಯ

ಭಾರತ-ಭುಟಾನ್ ಗಡಿ, ಸಿಕ್ಕಿಂ

ಅಮಾವಾಸ್ಯೆ ರಾತ್ರಿ. ಬೆಳಕಿನ ಸುಳಿವೂ ಇರಲಿಲ್ಲ. ಮುಖದ ಮುಂದೆ ಕೈಯಿಟ್ಟುಕೊಂಡರೂ ಕಾಣದಂತಹ ಕಗ್ಗತ್ತಲು. ಆದಿತ್ಯ ಕಳೆದ ಐದು ವರ್ಷಗಳಿಂದ ಇದೇ ಕಾಡುಗಳನ್ನು ಅಲೆದು ಈ ವಾತಾವರಣಕ್ಕೆ ಹಳೆಯವನಾಗಿಬಿಟ್ಟಿದ್ದ. ಸ್ವಲ್ಪವೇ ಹೊತ್ತಿನ ಹಿಂದೆ ಸುಮಾರು 10ಕಿಲೋಮೀಟರ್ ದೂರದಲ್ಲಿದ್ದ ಲಾಂಗ್ಥು ಎನ್ನುವ ಹಳ್ಳಿಯಲ್ಲಿ ತಿಂಡಿ ತಿಂದಿದ್ದನಾದ್ದರಿಂದ ಸಾಮಾನ್ಯವಾಗಿ ಹಾಕುವ ಕ್ಯಾಂಪ್‍ಫೈರ್ ಹಾಕಿಕೊಂಡಿರಲಿಲ್ಲ. ಇಂದಿನ ಈ ನಿಶ್ಯಬ್ಧ ಕಾಡಿನಲ್ಲಿ ಏಕೋ, ಏನೋ ಹಳೆಯ ನೆನಪುಗಳು ಕಾಡಹತ್ತಿದ್ದವು. ನಿಟ್ಟುಸಿರೆಳೆದು, ಸಣ್ಣ ವಜ್ರಗಳಂತೆ ಮಿನುಗುತ್ತಿದ್ದ ತಾರೆಗಳನ್ನು ನೋಡಿಕೊಂಡು ನಿಲ್ಲಿಸಲಾರದ ನೆನಪುಗಳ ರೈಲುಬಂಡಿಯನ್ನು ಹರಿಯಲು ಬಿಟ್ಟ.

ಬೆಂಗಳೂರು. ಐದು ವರ್ಷಗಳ ಹಿಂದೆ. ಆದಿತ್ಯ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸಯನ್ಸ್‍ನಲ್ಲಿ ಥಿಯರೆಟಿಕಲ್ ಫಿಸಿಕ್ಸ್ ಡಾಕ್ಟರಲ್ ಕ್ಯಾಂಡಿಡೇಟಾಗಿ ವ್ಯಾಸಂಗ ಮಾಡುತ್ತಿದ್ದ. ಅವನ ಅಡ್ವೈಸರ್‌ಆಗಿದ್ದ ಪ್ರೊ.ಸತ್ಯನಾರಾಯಣ ಮತ್ತು ಆದಿತ್ಯರಲ್ಲಿ ತಂದೆ-ಮಗನಿಗೂ ಮತ್ತು ಪ್ರಾಣಸ್ನೇಹಿತರಿಗೂ ಇರುವ ನಡುವಿನ ಸಂಬಂಧ. ಆದಿತ್ಯನೆಂದರೆ ಸತ್ಯನಾರಾಯಣರಿಗೆ ಎಲ್ಲಿಲ್ಲದ ಪ್ರೀತಿ, ಅವನಿಗೆ ಅವರಲ್ಲಿ ಅತ್ಯಂತ ವಿಶ್ವಾಸ, ಗೌರವ. ಇಬ್ಬರೂ ರಾತ್ರೋ-ರಾತ್ರಿ ಲ್ಯಾಬಿನಲ್ಲಿ ಫಿಸಿಕ್ಸ್ ಚರ್ಚಿಸುವುದೂ ಉಂಟು, ಸಮಯ ಸಿಕ್ಕರೆ ಜನತಾ ಹೋಟಲ್ ದೋಸೆ ತಿಂದು, ಸಿನಿಮಾಗೆ ಹೋಗುವುದೂ ಉಂಟು.

ಹೀಗಿರುವಲ್ಲಿ ಯಾವುದೋ ಒಂದು ತಾಂತ್ರಿಕ ವಿಚಾರವಾಗಿ ಅವರಿಬ್ಬರಲ್ಲಿ ಭೇದವುಂಟಾಗಿ ಇಬ್ಬರೂ ವಾಗ್ವಾದದ ವಿರುದ್ಧ ಪಡೆಗಳಲ್ಲಿ ನಿಂತರು. ಸತ್ಯನಾರಾಯಣರಿಗೆ ತಮ್ಮ ಆಶ್ರಿತ ಹುಡುಗ ತಮ್ಮ ವಿರುದ್ಧ ನಿಂತಿದ್ದಾನೆಂಬ ಅಹಂ. ಆದಿತ್ಯನಿಗೆ ಅವರು ತನ್ನ ವಾದವನ್ನು ಕೇಳಿಸಿಕೊಳ್ಳಲೂ ಸಿದ್ಧರಾಗಿಲ್ಲವೆಂಬ ಹತಾಶೆ. ಇಬ್ಬರೂ  ಮುಂಗೋಪಿಗಳು. ಇನ್ಸ್‍ಟಿಟ್ಯೂಟ್‍ನಲ್ಲಿ ಎಲ್ಲರ ಮುಂದೆ ದೊಡ್ಡ ಜಗಳ ನಡೆಯಿತು. ಸತ್ಯನಾರಾಯಣರು ಕೋಪದಲ್ಲಿ ’ನೀನು ಥಿಯೆರೆಟಿಕಲ್ ಫಿಸಿಕ್ಸ್‍ನಲ್ಲಿ ಪಿಎಚ್.ಡಿ ಹೇಗೆ ತೊಗೊತೀಯ ನಾನೂ ನೋಡ್ತೀನಿ’ ಎನ್ನಲು, ಅವರ ಹೊಟ್ಟೆಯುರಿಸಲು ಆದಿತ್ಯ ’ನಾನು ಪದವಿ ಪಡೆದ ದಿನ ತುಂಬಾ ಖುಶಿಯಾಗುತ್ತೆ ಅಂದಿದ್ರಲ್ಲ, ನಾನು ಪದವಿ ತೊಗೊಳೋದೇಯಿಲ್ಲ. ಇವತ್ತೇ ನಿಮ್ಮ ಡಿಪಾರ್ಟ್ಮೆಂಟ್ ಮತ್ತೆ ನಿಮ್ಮ ಇನ್ಸ್‍ಟಿಟ್ಯೂಟ್‍ಗೆ ಗುಡ್‍ಬೈ’ ಎಂದು ಎಲ್ಲವನ್ನೂ ಬಿಟ್ಟು ಈ ಕಾಡಿಗೆ ಬಂದಿದ್ದ. ಇದರಿಂದ ತನಗಿಂತ ಸತ್ಯನಾರಾಯಣರಿಗೇ ಹೆಚ್ಚು ದುಃಖವಾದದ್ದೆಂದು ಆದಿತ್ಯನಿಗೂ ತಿಳಿದಿತ್ತು.

ದೂರದಲ್ಲಿ ಸಿಡಿಲುಬಡಿದಂತಾಗಿ ನೆನಪಿನಧಾರೆಯಲ್ಲಿ ಮುಳುಗಿದ್ದ ಆದಿತ್ಯನಿಗೆ ಎಚ್ಚರವಾಯಿತು. ಮಳೆ ಬರಹತ್ತಿತೇಯೆಂದು ನೋಡಿದಾಗ ದೂರದಲ್ಲಿ ಆಕಾಶವನ್ನು ಭೇಧಿಸಿ ಬಂದಂತೆ ಅಗ್ನಿಗೋಳವೊಂದು ಕೆಳಗೆಬೀಳುತ್ತಿತ್ತು. ಆ ಗೋಲವು ನೆಲ ಕಚ್ಚಿದಾಗ ಸಣ್ಣ ಭೂಕಂಪವೇ ಆದಂತಾಗಿ ದೂರದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತು. ಸುಮಾರು 3-4ಕಿಲೋಮೀಟರ್ ದೂರದಲ್ಲಿರಬಹುದೆಂದು ಊಹಿಸಿ, ಆದಿತ್ಯ ಅದೇನೆಂದು ನೋಡಲು ಹೊರಟ.

***

ಬೆಂಕಿಯ ಹತ್ತಿರ ಹೋಗುತ್ತಿದ್ದಂತೆ ಸೀಮೆ‍ಎಣ್ಣೆಯ ದುರ್ನಾಥ. ದೂರದಿಂದಲೇ ಅಪಘಾತಕ್ಕೀಡಾಗಿದ್ದ ವಿಮಾನವೆಂದು, ಅದು ಹತ್ತಿ ಉರಿಯುತ್ತಿರುವುದೆಂದೂ ಆದಿತ್ಯನಿಗೆ ತಿಳಿಯಿತು. ವಿಮಾನದ ಮೇಲೆ ಇಂಡಿಯನ್ ಏರ್‌ಫೋರ್ಸ್ ಚಿಹ್ನೆಗಳಿದ್ದವು. ಏನಾದರೂ ಸಹಾಯ ಮಾಡಾಬಹುದೇ ಎಂದು ನೋಡಲು ಹತ್ತಿರ ಹೋದಾಗ, ವಿಮಾನದ ರೆಕ್ಕೆಗಳು ಕಡಿದು, ಅವುಗಳಲ್ಲಿದ್ದ ಇಂಧನ ಹತ್ತಿ ಉರಿಯುತ್ತಿರುವುದು ಗೋಚರವಾಯಿತು. ವಿಮಾನದ ಫ್ಯೂಸಲಾಜ್ ಜೆಜ್ಜಿಹೋಗಿದ್ದರೂ ಇನ್ನೂ ಇಡಿಯಾಗಿಯೇ ಇರುವುದನ್ನು ಕಂಡು ಅದರ ಬಳಿ ಹೋದ. ಒಳಹೊಕ್ಕು ನೋಡಿದಾಗ ಒಳಗೆ ಆರು ಮಂದಿ ಇದ್ದರು. ಎಲ್ಲರೂ ಹಣೆಗೊಂದು, ಕತ್ತಿಗೊಂದು ಎನ್ನುವಂತೆ ಗುಂಡೇಟು ತಿಂದು ಹತರಾಗಿರುವುದು ಕಾಣಿಸಿತು.

ಅಪಘಾತವಾಗಿ ಹೆಚ್ಚೆಂದರೆ ಒಂದು ತಾಸಾಗಿದ್ದಿರಬಹುದು. ಒಳಗಿದ್ದವರು ಅದರ ನಂತರ ಗುಂಡೇಟಿಗೀಡಾಗಿರಬೇಕು. ಹಾಗಾದರೆ ಗುಂಡು ಹಾರಿಸಿದವರು ಹತ್ತಿರದಲ್ಲೇ ಇರಬೇಕು. ಆದಿತ್ಯ ತಕ್ಷಣ ಜಾಗ್ರತನಾದ. ಆತ್ಮರಕ್ಷಣೆಗೆ ಯಾವುದಾದರೂ ಆಯುಧ ಸಿಗುವುದೇಯೆಂದು ಟಾರ್ಚ್ ಹಿಡಿದು ಹುಡುಕಾಡ ತೊಡಗಿದ. ವಿಮಾನದ ಹಿಂಭಾಗದಲ್ಲಿ ತಿಜೋರಿಯೊಂದು ಕಾಣಿಸಿತು. ಬಹುಶಃ ಶಸ್ತ್ರಗಳಿರಬಹುದೆಂದು ಯೋಚಿಸಿ ತೆಗೆಯಲು ಹೋದಾಗ ಬೀಗವಿಲ್ಲದಿರುವುದು ನೋಡಿ ವಿಚಿತ್ರವೆನಿಸಿತು. ಎಂಥ ವಿಪರ್ಯಾಸವೆಂದುಕೊಳ್ಳುತ್ತ ಬಾಗಿಲು ತೆಗೆದ.

ತಿಜೋರಿಯೊಳಗೆ ಆಯುಧಗಳಂತೂ ಇರಲಿಲ್ಲ. ಮಧ್ಯೆ ಮುಷ್ಠಿಯಾಕಾರದ ಗಾಜಿನ ಗುಂಡು. ಗುಂಡಿನೊಳಗಿನಿಂದ ಒಂದು ರೀತಿಯ ಮಬ್ಬುನೀಲಿ ಬೆಳಕು ಚೆಲ್ಲುತ್ತಿತ್ತು. ಪ್ಲೂಟೋನಿಯಮ್ ಅಥವ ಬೇರೆ ರೇಡಿಯೋ-ಅಕ್ಟಿವ್ ಮೆಟೀರಿಯಲ್ ಇರಬಹುದೆಂದು ತಟ್ಟನೆ ಬಾಗಿಲು ಮುಚ್ಚಿ, ಹಳದಿ ಚಕ್ರದಲ್ಲಿ ಮೂರು ರೆಕ್ಕೆಗಳಿರುವ ರೇಡಿಯೋ-ಆಕ್ಟಿವ್ ಚಿಹ್ನೆ ಹುಡುಕಿದ. ಯಾವುದೂ ಕಾಣಿಸಲಿಲ್ಲ. ಏನೋ ಒಳಗಿನಿಂದ ಕೂಗಿಕರೆದ ಆಭಾಸ. ನಿಧಾನವಾಗಿ ಬಾಗಿಲನ್ನು ತೆಗೆದು ಗುಂಡನ್ನು ಮುಟ್ಟಿದ. ತಣ್ಣಗಿತ್ತು, ರೇಡಿಯೋ-ಆಕ್ಟಿವ್ ವಸ್ತುಗಳ ತಾಪವಿರಲಿಲ್ಲ. ಎಚ್ಚರಿಕೆಯಿಂದ ಗುಂಡನ್ನು ಕೈಗೆತ್ತಿಕೊಂಡ.

"ಹೇಯ್, ಆದಿತ್ಯ! ಹೇಗಿದ್ದೀಯ? ಎಷ್ಟು ದಿನಗಳಾಗಿಹೋದವು ನಿನ್ನ ನೋಡಿ!" ನೀತಾಳ ಧ್ವನಿ. ನೀತಾ ಆದಿತ್ಯನ ಕಾಲೇಜಿನ ಸಮಯದ ’ಸ್ಪೆಶಲ್-ಫ್ರೆಂಡ್’. ಅವಳಿಗೆ ಕಾಲೇಜಿನ ನಲ್ಕು ವರ್ಷ ಮನಸ್ಸೋತಿದ್ದೂ ಆಗಿತ್ತು, ನಂತರ ಅವಳನ್ನು ಮರೆತದ್ದೂ ಆಗಿತ್ತು. ಇಂದಿಗೂ ಆಕೆಗೆ ’ಸ್ಪೆಶಲ್-ಫ್ರೆಂಡ್’ನ ದರ್ಜೆ.

"ಗುಡ್, ಗುಡ್. ಹೂಂ ಬಹಳ ವರ್ಷಗಳಾಗಿಹೋದವು. ನೀನು?" ಆದಿತ್ಯನ ಮನಸಿನಲ್ಲೇ ಸಲ್ಲಾಪ.

"ನಾಟ್-ಸೋ-ಗುಡ್" ಸಣ್ಣ ನಗೆ "ಆದರೆ ನಿನ್ನ ನೋಡಿ ತುಂಬಾ ಖುಷಿಯಾಗ್ತಾ ಇದೆ"

"ನನಗೂ ಅಷ್ಟೆ. ಆಸ್ ಆಲ್ವೇಸ್"

ಹೀಗೇ ಮಾತನಾಡುತ್ತ ಆದಿತ್ಯ ಅದೃಷ್ಯ ಶಕ್ತಿಯೊಂದು ಸೆಳೆಯುತ್ತಿರುವಂತೆ ಕಾಡಿನಲ್ಲಿ ಒಂದು ಸಣ್ಣ ಬಯಲಿನ ತುದಿಯಲ್ಲಿ, ಮರಗಳ ಮರೆಯಲ್ಲಿ ನಿಂತಿದ್ದ.

"ಹೇಯ್...ಅಲ್ನೋಡು! ಆ ಹುಡುಗಿಗೆ ಟರ್ಚರ್ ಮಾಡ್ತಿದ್ದಾರೆ"

ಮರಗಳ ಮರೆಯಿಂದ ನೋಡಿದಾಗ ಹೆಂಗಸಳೊಬ್ಬಳನ್ನು ಮರಕ್ಕೆ ಕಟ್ಟಿಹಾಕಿದ್ದು ಕಾಣಿಸಿತು. ಯಾರೋ ಮನಸ್ಸನ್ನು ವಶಪಡಿಸಿಕೊಂಡಂತೆ ಆದಿತ್ಯ ತನ್ನ ಕೈಯಲ್ಲಿದ್ದ ಗಾಜಿನ ಚೆಂಡನ್ನು ಮರವೊಂದರ ಬುಡದಲ್ಲಿಟ್ಟು ಮರ ಹತ್ತಿದ. ಏನೋ ಅಗಲಿಹೋದಂತಹ ಆಭಾಸ.

ಬಯಲಿನ ಮಧ್ಯದಲ್ಲಿ ಕ್ಯಾಂಪ್‍ಫಯರ್ ಉರಿದಿತ್ತು. ಕಟ್ಟಿಹಾಕಿದ್ದ ಹುಡುಗಿಗೆ ಸುಮಾರು 30ವರ್ಷ ವಯಸ್ಸಿದ್ದಿರಬಹುದು. ಸುಂದರಳಾಗಿದ್ದಾಳೆ. ಕಣ್ಣಿಗೆ ಹಾಕಿದ ಕನ್ನಡಕ ಸೊಟ್ಟಗಾಗಿದೆ, ಅವಳ ತೋಳು-ಕೆನ್ನೆಗಳ ಮೇಲೆ ಚಿತ್ರಹಿಂಸೆಯ ಗುರುತುಗಳು. ಅವಳ ಮುಂದೆ ಗುಂಡುತಲೆಯ ಖಳನಾಯಕ. ಚಾಕು ಹಿಡಿದು ಹುಡುಗಿಯ ತೋಳಿನ ಮೇಲೆ ಗಾಯವೊಂದನ್ನು ಮಾಡಿ, ಗಾಯದೊಳಗಿನ ನರವೊಂದನ್ನು ಕೆಣಕುತ್ತಿದ್ದಾನೆ. ಅವನು ಒಮ್ಮೊಮ್ಮೆ ನರವನ್ನು ಹಿಂಸಿಸಲು, ಹುಡುಗಿ ನೋವಿನಿಂದ ಅರಚುತ್ತಿದ್ದಾಳೆ. ಹುಡುಗಿಯ ಕಣ್ಣುಗಳಿಂದ ದುಃಖ, ವೇದನೆಗಳ ಕಣ್ಣೀರಧಾರೆಗಳು ಹರಿದುಹೋಗುತ್ತಿವೆ.

"ಹೇಳು ಎಲ್ಲಿದೆ ’ಶಕುನಿ’" ಹಿಂದಿಯಲ್ಲಿ ಘರ್ಜಿಸಿದ ಕೇಡಿಗ. "ಇಡೀ ರಾತ್ರಿ ಹೀಗೇ ಟಾರ್ಚರ್ ಮಾಡಬಲ್ಲೆ"

ಆದಿತ್ಯನಿಗೆ ಈ ಅನ್ಯಾಯ ಸಹಿಸಲಿಲ್ಲ. ಆ ಹುಡುಗಿಯನ್ನು ಹೇಗಾದರೂ ಉಳಿಸಬೇಕೆನ್ನುವ ಯೋಚನೆ ಮಾಡಿ ಪೊದೆಯಲ್ಲಿ ಹಿಂಜರಿದ. ಅರಿವಿಲ್ಲದೆ ಗಾಜಿನ ಗುಂಡನ್ನು ಪುನಃ ಕೈಗೆತ್ತಿಕೊಂಡ.

"ಇಲ್ಲಿಂದ ಬೇಡ, ಆಕಡೆಯಿಂದ ಹೋಗೋಣ" ಮತ್ತೆ ನೀತಾಳ ಧ್ವನಿ. ಆದಿತ್ಯನಿಗೆ ತಬ್ಬಿಬ್ಬಾಯಿತು. ಎಲ್ಲೋ, ಏನೋ ಎಡವಟ್ಟಾಗಿದೆಯೆಂಬ ಭಾವನೆ. ಯೋಚಿಸುವಷ್ಟು ಸಮಯವಿಲ್ಲ. ಪೊದೆಗಳ ಮರೆಯಲ್ಲಿ ನಿಶ್ಯಬ್ಧವಾಗಿ ನೀತಾ ಹೇಳಿದ ಕಡೆ ಹೋದ. ಅಲ್ಲೊಬ್ಬ ಕಾವಲುಗಾರ ಕಾಯುತ್ತಿದ್ದ.

"ಆ ಮರದ ಬುಡದಲ್ಲಿ ಒಂದು ಇಟ್ಟಿಗೆ ಗಾತ್ರದ ಕಲ್ಲಿದೆ. ಕೈಗೆತ್ತಿಕೊ" ಅದೇ ಧ್ವನಿ. ಕತ್ತಲಲ್ಲಿ ತಡವರಿಸಿದಾಗ ಕಲ್ಲು ಸಿಕ್ಕಿತು. "ಇನ್ನೂ ಮೂರು ಹೆಜ್ಜೆ ಮುಂದೆ ಬಾ" ಆದಿತ್ಯ ಹಾಗೆಯೇ ಮಾಡಿದ. "ಈಗ ಕಲ್ಲಿನಿಂದ ಆ ಕಾವಲುಗಾರನ ತಲೆ ಚೆಚ್ಚು"

ಕಲ್ಲೇಟು ತಿಂದ ಕಾವಲುಗಾರ ನಿಂತಲ್ಲೇ ಕುಸಿದ.

"ಅವನ ಬೆಲ್ಟಲ್ಲಿ ಒಂದು ಚಾಕು ಇದೆ. ಅದನ್ನು ಕೈಗೆತ್ತಿಕೊ". ಕಾವಲುಗಾರನ ಸೊಂಟಕ್ಕೆ ಕಟ್ಟಿದ್ದ ಹಂಟಿಂಗ್ ನೈಫ್ ಆದಿತ್ಯ ಕೈಗೆತ್ತಿಕೊಂಡ. "ಹಿಂದಿನಿಂದ ನಿಧಾನವಾಗಿ ಹೋಗಿ ಆ ಬೋಡತಲೆ ಮೇಲೆ ಧಾಳಿ ಮಾಡು. ಹೆಚ್ಚು ಕಡಿಮೆಯಾದರೆ ಅವನನ್ನು ಕೊಲ್ಲಲು ಹಿಂಜರೀಬೇಡ"

ಚಾಕು ಪ್ರಹಾರ ಮಾಡಲು ಹೋದ ಆದಿತ್ಯ ಕಾಲು ಜಾರಿ ಕೆಳಗೆ ಬಿದ್ದ. ಶಬ್ಧ ಕೇಳಿದ ಕೇಡಿಗ ತಟ್ಟನೆ ಆದಿತ್ಯನ ಮೇಲೆ ಮರು ಧಾಳಿ ಮಾಡಿದ. ಆದಿತ್ಯ ತಪ್ಪಿಸಿಕೊಂಡು ಕೈಯಲ್ಲಿದ್ದ ಚಾಕುವನ್ನು ಕೇಡಿಗನ ತೊಡೆಗೆ ಹಾಕಿದ. ಕೂಗುತ್ತ ಕೆಳಗೆ ಬಿದ್ದ ಕೇಡಿಗನ ತಲೆಗೆ ಬಲವಾಗಿ ಒದ್ದಾಗ ಅವನು ಜ್ಞಾನ ತಪ್ಪಿತು.

"ನಿನ್ನ ಹಿಂದೆ! ಗನ್‍ನಿಂದ ಗುರಿಯಿಟ್ಟಿದ್ದಾನೆ! ಬೋಡ್‍ತಲೆ ಚಾಕು ನಿನ್ನ ಎಡಗೈ ಪಕ್ಕದಲ್ಲಿದೆ. ಎಡಗಡೆಗೆ ಒಂದು ಸುತ್ತು ಉರುಳಿ ಅವನ ಮೊಣಕಾಲಿಗೆ ಇರಿ" ಮತ್ತೆ ನೀತಾ.

ಆದಿತ್ಯ ಹಾಗೆಯೇ ಮಾಡಿದಾಗ, ಮತ್ತೊಬ್ಬ ದುಷ್ಟ ರಕ್ತಮಯವಾದ ಮೊಣಕಾಲು ಹಿಡಿದು ಕುಂಟುತ್ತ ಕಾಡಿನಲ್ಲಿ ಮರೆಯಾದ.

"ಅವನಿಗೇನು ಗಾಯವಾಯಿತು ಅಂತ ಯೋಚನೆ ಮಾಡ್ತಿದ್ರೆ ಅವನ ಮೊಣಕಾಲು ಫ್ರ್ಯಾಕ್ಚರ್ ಆಗಿದೆ, ಲಿಗಮೆಂಟ್ ಹರಿದುಹೋಗಿದೆ. ಮತ್ತೆ ಸರಿಯಾಗಿ ನಡೆಯೋಕ್ಕೆ ಎಕ್ಸಾಕ್ಟ್‍ಲಿ ಆರು ತಿಂಗಳು, ಒಂದು ವಾರ, ಮೂರು ದಿನಗಳಾಗ್ತವೆ"

ಆದಿತ್ಯನಿಗೆ ಏನಾಗುತ್ತಿದೆಯೆಂದೇ ತಿಳಿಯಲೊಲ್ಲದಾಗಿತ್ತು. ಮಾತನಾಡುತ್ತಿರುವುದು ನೀತಾಳಲ್ಲವೆಂದು ಎಲ್ಲೋ ಒಂದು ಕಡೆ ತಿಳಿದಿತ್ತು. ಆದರೂ ನೀತಾಳನ್ನು ನೋಡಿದಂತಹ ಉತ್ಸಾಹ. ಏಡಗೈಯಲ್ಲಿ ಹಿಡಿದಿದ್ದ ಚೆಂಡು ಕೈಜಾರಿದಾಗ ಆದಿತ್ಯ ಅದನ್ನು ಭದ್ರ ಮಾಡಿಕೊಂಡ.

ನೀತಾ ದೂಷಿಸುವ ಧ್ವನಿಯಲ್ಲಿ "ನನ್ನ ಬೀಳಿಸೋದಿಲ್ಲ ತಾನೆ"

"ಓಹ್...ನೀತಾ! ಇಲ್ಲ-ಇಲ್ಲ...ಯಾವಾಗಲಿಂದಲೂ ನಿನ್ನನ್ನ..."

"ನೀತಾ...ನಿನ್ನಿಂದ ತುಂಬಾ ದೂರ ಹೊರಟುಹೋಗಿದ್ದಾಳೆಯಂತ ಗೊತ್ತು ತಾನೆ?"

"ಹೂಂ...ಗೊತ್ತು" ಈ ಕ್ಷಣದಲ್ಲಿ ಆದಿತ್ಯನಿಗೆ ಅದರ ಪರಿವೆಯೇ ಇರಲಿಲ್ಲ.

"ನನ್ನನ್ನ ನೀತಾ ಅಂತಲೇ ಕರೆದರೂ ನನಗೇನೂ ಬೇಜಾರಿಲ್ಲ" ನೀತಾ ಕಿಲಕಿಲನೆ ನಕ್ಕಂತಾಯಿತು. "ಒಂದಿನ ನನ್ನ ನಿಜವಾದ ಹೆಸರು ಹೇಳ್ತೀನಿ ನಿನಗೆ"

ನೀತಾ ಮಾತನಾಡಿದಷ್ಟೂ ಆದಿತ್ಯನಿಗೆ ಸಾಂತ್ವನ, ಶಾಂತಿ. "ನೀತಾನ ಬಿಡು. ಈಗ ಆ ಹುಡುಗಿ ಬಗ್ಗೆ ಯೋಚನೆ ಮಾಡು. ಅವಳನ್ನು ಉಳಿಸೋದು ಹೇಗೆ ಚಿಂತಿಸು. ಅವಳ ಜೊತೆ ನೀನಿನ್ನೂ 188, 19ನೇ ಕ್ರಾಸ್ ಮಲ್ಲೇಶ್ವರಂ‍ಗೆ ಹೋಗಬೇಕು. ಸಧ್ಯಕ್ಕೆ ನನ್ನನ್ನ ನಿನ್ನ ಜ್ಯಾಕೆಟ್‍ನಲ್ಲಿ ಸುತ್ತಿ ಬ್ಯಾಕ್‍ಪ್ಯಾಕ್ ಒಳಗಿಡು"

ಆದಿತ್ಯ ಗುಂಡನ್ನು ಬ್ಯಾಕ್‍ಪ್ಯಾಕಿನೊಳಗಿಟ್ಟು, ಕಟ್ಟಿಹಾಕಿದ್ದ ಹುಡುಗಿಯ ಬಳಿ ಹೋಗಿ "ಹೆದರಬೇಡಿ. ನಾನು ನಿಮ್ಮನ್ನು ಬಿಡಿಸೋಕ್ಕೆ ಬಂದಿದ್ದೇನೆ" ಹಿಂದಿಯಲ್ಲಿ ಹುಡುಗಿಗೆ ಹೇಳುತ್ತ ಅವಳ ಕಟ್ಟನ್ನು ಬಿಚ್ಚ ತೊಡಗಿದ.

ಕಟ್ಟು ಬಿಚ್ಚಿದ ಕೂಡಲೆ ಕೋಪಾವೇಶದಿಂದ ಕೂಗುತ್ತ ಆಕೆ ಮೂರ್ಛೆ ಬಿದ್ದಿದ್ದ ಬೋಡತಲೆ ಕೇಡಿಗನ ಪಕ್ಕೆಗೆ ಸಾಧ್ಯವಾದಷ್ಟು ಜೋರಾಗಿ ಒದ್ದಳು. ಆದಿತ್ಯ ಅವಳ ತೋಳುಗಳನ್ನು ಹಿಡಿದು, ಸಮಾಧಾನ ಮಾಡಿ, ಅವಳಿಗೆ ಆಸರೆ ಕೊಡುತ್ತ ಅವಳೊಂದಿಗೆ ಬಯಲಿನಿಂದ ಹೊರಬಿದ್ದ.

ಲಾಂಗ್ಥು ಹಳ್ಳಿ ಸುಮಾರು ೫-೬ಕಿಲೋಮೀಟರ್ ದೂರದಲ್ಲಿದೆಯೆಂದು ಆದಿತ್ಯನಿಗೆ ತಿಳಿದಿತ್ತು. ಇಬ್ಬರೂ ಸದ್ದಿಲ್ಲದೆ, ಮಾತಿಲ್ಲದೆ ನಡೆಯತೊಡಗಿದರು. ಸ್ವಲ್ಪ ದೂರ ಹೋದ ನಂತರ ಆದಿತ್ಯ ಅವಳನ್ನು ಕೂರುವಂತೆ ಹೇಳಿ, ತನ್ನ ಬ್ಯಾಕ್‍ಪ್ಯಾಕಿನಿಂದ ನೀರು ತೆಗೆದು ಅವಳಿಗೆ ಕುಡಿಯಲು ಕೊಟ್ಟು, ಫಸ್ಟ್‍ಏಡ್ ಕಿಟ್ ತೆಗೆದು ಅವಳ ತೋಳಿನ ಗಾಯವನ್ನು ಕ್ಲೀನ್ ಮಾಡಿ ಪಟ್ಟಿ ಹಾಕಿದ.

"ಇದು ಸಾಲೋದಿಲ್ಲ. ನೀವು ಆದಷ್ಟೂ ಬೇಗ ಹಾಸ್ಪೆಟಲ್ ಸೇರಿ ಟ್ರೀಟ್ಮೆಂಟ್ ತೊಗೋಬೇಕು"

ನಿಶ್ಯಕ್ತಿಯಿಂದ ತಲೆದೂಗಿದಳು ಹುಡುಗಿ.

"ಊರು ಇಲ್ಲಿಂದ ಸುಮಾರು 4ಕಿಲೋಮೀಟರ್ ದೂರದಲ್ಲಿದೆ. ಸಣ್ಣ ಹಳ್ಳಿ ಆದರೆ ಒಂದು ಕಾರೋ ಟ್ಯಾಕ್ಸಿಗೋ ಫೋನ್ ಮಾಡಬಹುದು. ಅಲ್ಲಿಯವರೆಗು ನಡೆದೇ ಹೋಗಬೇಕು. ನಿಮಗ ನಡೆಯೋಕ್ಕೆ ಆಗುತ್ತಾ?"

ಪುನಃ ತಲೆದೂಗಿದಳು ಹುಡುಗಿ.

ಹುಡುಗಿಗೆ ಮಾತೇ ಹೊರಳದಿರುವಷ್ಟು ಸುಸ್ತಾಗಿರುವುದು ಆದಿತ್ಯನಿಗೆ ಕಾಣಿಸುತ್ತಿತ್ತು. ಆಕೆಯನ್ನು ಯಾವ ಪ್ರಶ್ನೆಯೂ ಕೇಳದೆ, ಅವಳಿಗೆ ಆಧಾರ ಕೊಡುತ್ತ ನಡೆಸಿಕೊಂಡು ಹೊರಟ. ಬೆಳಗಾಗುವಷ್ಟು ಹೊತ್ತಿಗೆ ಇಬ್ಬರೂ ಲಾಂಗ್ಥು ಹಳ್ಳಿಯನ್ನು ಸೇರಿಕೊಂಡರು.

ಲಾಂಗ್ಥು ಎರಡು ರಸ್ತೆಗಳ ಪುಟಾಣಿ ಹಳ್ಳಿ. ಆದಿತ್ಯ ಇರಲು ಒಂದು ಕೋಣೆಯ ವ್ಯವಸ್ಥೆ ಮಾಡಿ, ಡಾಕ್ಟರ್ ಕರೆಸಿ, ನಂತರ ದೂರದ ರೇಶಿ ನಗರದಿಂದ ಕಾರೊಂದನ್ನು ಬರಹೇಳಿದ. ಕಾರು ಬರುವುದು ಕನಿಷ್ಠ ಮಧ್ಯಹ್ನ 3:00ಘಂಟೆಗೆಂದು ತಿಳಿದಾಗ ತಿನ್ನಲು ತಿಂಡಿ ತರಿಸಿ, ಮಲಗಿದ್ದ ಹುಡುಗಿಯನ್ನು ಎಬ್ಬಿಸಿ ಅವಳಿಗೂ ಸ್ವಲ್ಪ ತಿನ್ನಿಸಿ, ತಾನೂ ತಿಂದು, ಈಸೀಚೇರಿಗೆ ಬೆನ್ನೊರಗಿ ತಾನೂ ಮಲಗಲು ಪ್ರಯತ್ನಿಸಿದ.

ಏನೇನೋ ನೆನಪುಗಳ ಕಾಟ. ನೀತಾಳ ಜೊತೆ ಮಾತನಾಡಿದ ನೆನಪು. ನೀತಾ? ಇಲ್ಲಿ? ಅದು ಹೇಗೆ? ಕ್ರ್ಯಾಶ್ ಆಗಿದ್ದ ವಿಮಾನದಿಂದ ಹುಡುಗಿ ಇದ್ದ ಬಯಲಿಗೆ ಹೋದದ್ದು ಹೇಗೆ? ಅದರ ನೆನಪೇಯಿಲ್ಲ. ನಂತರ ಕೇಡಿಗರ ಜೊತೆ ಹೋರಾಟ. ಯಾರೋ ಸಹಾಯ ಮಾಡುತ್ತಿದ್ದರೇ? ಹಾಗೇಕೆ ಅನ್ನಿಸುತ್ತಿದೆ? ಎಲ್ಲವೂ ಗೊಂದಲ. ಬ್ಯಾಕ್‍ಪ್ಯಾಕಿನಲ್ಲಿ ಏನೋ ಇಟ್ಟ ನೆನಪು. ತಟ್ಟನೆ ಎದ್ದು ಬ್ಯಾಕ್‍ಪ್ಯಾಕ್ ತೆಗೆದು ನೋಡಿದ. ತನ್ನ ಜಾಕೆಟ್‍ನಲ್ಲಿ ಸುತ್ತಿಟ್ಟಿದ್ದ ಗಾಜಿನ ಗುಂಡು. ಪುನಃ ನೀತಾಳ ಧ್ವನಿ...

***

ಘಂಟೆ ಸುಮಾರು 1:00ಆಗಿತ್ತು. ಆದಿತ್ಯ ಮೈಮೇಲೆ ಜ್ಞಾನವೇ ಇಲ್ಲದಂತೆ ಗಾಜಿನ ಗುಂಡಿನೊಂದಿಗೆ ಮಾತಿನಲ್ಲಿ ಮುಳುಗಿ ಹೋಗಿದ್ದ. ಒಮ್ಮೆಲೆ ಗಾಜೊಡೆದ ಶಬ್ಧ. ಬಿಸಿ ಹೊಯ್ಗಾಳಿ ಅವನ ತಲೆಗೂದಲ ಬೈತಲೆ ತೆಗೆಯಿತು. ಮರುಕ್ಷಣದಲ್ಲಿ ಗಾಜಿನ ತುಂಡೊಂದು ಅವನ ಕೈಗೆ ನಾಟಿ ಗಾಜಿನ ಗುಂಡು ಕೈಜಾರಿ ನೆಲಕ್ಕೆ ಬಿತ್ತು. ಗಾಢನಿದ್ರೆಯಿಂದ ಎಚ್ಚರವಾದಂತಹ ಅನುಭವ. ಕ್ಷಣಾರ್ಧದಲ್ಲಿ ಯಾರೋ ಕಿಟಕಿಯಿಂದ ಗುಂಡು ಹಾರಿಸಿದ್ದಾರೆ, ಕಿಟಕಿ ಗಾಜು ಒಡೆದಿದೆ, ಹೊಯ್ಗಾಳಿ ಒಳಗೆ ಬಂದ ಗುಂಡಿನದ್ದು ಎಂದು ವಿಶ್ಲೇಷಣೆ ಮಾಡಿಕೊಂಡ. ಆತ್ಮರಕ್ಷಣೆ ಉಚ್ಛವಾಯಿತು. ಮಲಗಿದ್ದ ಹುಡುಗಿಯನ್ನು ಎಬ್ಬಿಸಿ, ಇಬ್ಬರೂ ಕೋಣೆಯ ಹಿಂಬಾಗಿಲಿನಿಂದಾಚೆ ಹೋಗಿ ಪೊದೆಗಳಲ್ಲಿ ಅಡಗಿಕೊಂಡರು.

ಆದಿತ್ಯ ಮುಂದಿನ ನಡೆಯನ್ನು ಯೋಚಿಸುತ್ತಿರಲು, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಹುಡುಗಿ ತನ್ನ ಜೇಬಿನಿಂದ ಸೆಲ್‍ಫೋನ್ ತೆಗೆದು ನಂಬರ್ ಒತ್ತ ತೊಡಗಿದಳು.

"ದೂರದ ಹಳ್ಳಿ ಮೇಡಮ್. ಒಂದು ಕಡ್ಡಿ ಸಿಗ್ನಲ್ಲೂ ಇರೋದಿಲ್ಲ" ಎಂದ ಆದಿತ್ಯ.

"ಇದು ಸೆಲ್‍ಫೋನ್ ಅಲ್ಲ. ಸ್ಯಾಟಿಲೈಟ್‍ಫೋನ್" ಎನ್ನುತ್ತ ಹುಡುಗಿ ಫೋನಿನೊಳಕ್ಕೆ ಮಾತನಾಡಿದಳು. "ಹಲೋ? ಬೇಟಾ-ಟ್ಯಾಂಗೋ ಆಥೊರೈಸೇಶನ್ BT2913782. ನನ್ನ ಫೋನ್ ಜಿ.ಪಿ.ಎಸ್ ಲೊಕೇಶನ್‍ಗೆ ಲಾಕ್ ಮಾಡಿಕೊಳ್ಳಿ. ಆಲ್ಫಾ ಮತ್ತೆ ನಮ್ಮ ಟೀಮಿನ ಉಳಿದವರು ಏರ್‌ಕ್ರ್ಯಾಶ್‍ನಲ್ಲಿ ಸತ್ತು ಹೋಗಿದ್ದಾರೆ. ನನ್ನ ಲೊಕೇಶನ್‍ಗೆ ತಕ್ಷಣ ಏರ್-ಸಪೋರ್ಟ್ ಬೇಕು. ವಿ ಆರ್ ಅಂಡರ್ ಅಟ್ಯಾಕ್!"

ಆದಿತ್ಯ ಆಕೆಯನ್ನು ಕಕ್ಕಾಬಿಕ್ಕಿಯಾಗಿ ನೋಡ ತೊಡಗಿದ. ಈಕೆ ಬಂದದ್ದು ಇಂಡಿಯನ್ ಏರ್‌ಫೋರ್ಸ್ ಪ್ಲೇನಿನಲ್ಲಿ ಎಂದು ಹೊಳೆಯಿತು. ಆದರೂ...ಏರ್-ಸಪೋರ್ಟ್? ಅಟ್ಯಾಕ್? ಯಾರಿರಬಹುದೀಕೆ?

ಫೋನ್ ಮುಚ್ಚಿ ಜೇಬಿನಲ್ಲಿರಿಸುತ್ತ "ಏರ್ ಸಪೋರ್ಟ್ ಬರೋಕ್ಕೆ ಇನ್ನೂ ಕನಿಷ್ಠ 20 ನಿಮಿಷ ಆಗುತ್ತೆ. ಬಗ್ಡೋಗ್ರಾ ಏರ್‌ಫೊರ್ಸ್ ಬೇಸ್‍ನಿಂದ MI26 ಹೆಲಿಕಾಪ್ಟರ್ ಹೊರಟಿದೆ" ಎಂದಳು.

"ಯಾರು ನೀವು, ಮೇಡಮ್? ಇಂಡಿಯನ್ ಏರ್‌ಫೊರ್ಸ್ ನಿಮ್ಮ ಮಾತು ಕೇಳುತ್ತಾ? ಯಾಕೆ? ಹ್ಯಾಗೆ?"

"ಅಯ್ಯೋ ಅದೆಲ್ಲ ಬಿಡಿ. ಅದಕ್ಕೀಗ ಸಮಯವಿಲ್ಲ. ಅವರು ಇಲ್ಲಿಯವರೆಗು ಬಂದಿದ್ದಾರೆಯೆಂದರೆ ಶಕುನಿ ಅವರ ಬಳಿಯಿಲ್ಲ" ಆದಿತ್ಯನ ಆಶ್ಚರ್ಯಚಕಿತ ಮುಖ ನೋಡಿ "ಒಂದು ಗಾಜಿನ ಗುಂಡು, ಸುಮಾರು ಇಷ್ಟು ದಪ್ಪವಾಗಿದೆ" ಎಂದು ಆಕಾರ ಕೈಯಲ್ಲಿ ತೋರಿಸಿದಳು.

’ಏನೋ ಮರೆತಿದ್ದೀನಿ’ ಎಂಬ ಯೋಚನೆಯಲ್ಲಿ ಇದ್ದ ಆದಿತ್ಯನಿಗೆ ತಟ್ಟನೆ ನೆನಪಾದಂತಾಯಿತು "ಓಹ್...ಕ್ರಿಕೆಟ್‍ಬಾಲ್ ಸೈಜು. ಒಳಗೆ ಮಬ್ಬುನೀಲಿ ಬೆಲಕು...ಕೈಗೆತ್ತಿಕೊಂಡರೆ..." ತಡವರಿಸಿದ ಆದಿತ್ಯ.

"ಓಹ್-ಲಾರ್ಡ್! ಎಲ್ಲಿ? ಎಲ್ಲಿದೆ ಅದು?"

"ಅದನ್ನೇ ಶಕುನಿ ಅಂತ ನೆನ್ನೆ ರಾತ್ರಿ ನಿಮ್ಮ ಟರ್ಚರರ್ ಹೇಳ್ತಿದ್ದಿದ್ದಾ?"

ಕಣ್ಣು ಮುಚ್ಚಿ ಹುಡಿಗಿ ನಿಟ್ಟುಸಿರು ಬಿಟ್ಟಳು. ರಾತ್ರಿಯ ಯಾತನೆ ನೆನಪಾದಂತಾಯಿತು. ತಕ್ಷಣ ತೋಳಿನಲ್ಲಾದ ಗಾಯವನ್ನು ನೋಡಿಕೊಂಡು, ಪಟ್ಟಿ ಹಾಕಿರುವುದನ್ನು ಕಂಡು ಆದಿತ್ಯನ ಕಡೆ ಹುಬ್ಬೇರಿಸಿದಳು.

ತಾನೇ ಅದಕ್ಕೆ ಕಾರಣವೆಂದು ಆದಿತ್ಯ ತಲೆದೂಗಿದ. "ಆ ಗಾಜಿನ ಗುಂಡು...ನನ್ನ ಕೈಯಲ್ಲೇ ಇತ್ತು...ಅನ್ಸುತ್ತೆ. ಒಂಥರ ಕನಸಿನಂತಹ ನೆನಪು. ಪ್ರಯತ್ನ ಮಾಡಿದಷ್ಟೂ ದೂರ ಓಡುತ್ತೆ"

"ಹಾಗಾದರೆ ಅದೇ ಶಕುನಿ. ನೆನಪಿಸಿಕೊಳ್ಳಿ ಎಲ್ಲಿತ್ತು? ಅದನ್ನು ಅವರ ಕೈಸೇರದಂತೆ ನೋಡಿಕೊಳ್ಳೋದು ತುಂಬಾ ಮುಖ್ಯ"

"ನನ್ನ ಕೈಯಲ್ಲೇ ಇತ್ತು...ಅನ್ಸುತ್ತೆ. ಜಾರಿ ಕೆಳಗೆ ಬಿದ್ದಿರಬೇಕು"

ಇಷ್ಟು ಹೊತ್ತಿಗಾಗಲೇ ಐದಾರು ಮಂದಿ ಕೋಣೆಗೆ ಮುತ್ತಿಗೆಯಿಟ್ಟಿದ್ದರು. ಕಿಟಕಿ-ಬಾಗಿಲುಗಳಿಂದ ಗುಂಡು ಹಾರಿಸಿ ಸ್ವಲ್ಪ ಸಮಯಾನಂತರ ಇಬ್ಬರು ಕೋಣೆಯೊಳಗೆ ನುಗ್ಗಿದರು. ಬಾಗಿಲುಗಳು ಬಡಿಯುವ ಶಬ್ಧ. ಬಾತ್‍ರೂಮ್, ಕಪಾಟು, ಎಲ್ಲವನ್ನೂ ತೆಗೆದು ನೋಡುತ್ತಿರುವಂತೆ. ಕೊನೆಗೆ ಹಿಂಬಾಗಿಲಿಗೆ ಬಂದು ನಿಂತ ಒಬ್ಬ ಕೂಗಿ ಅಲ್ಲಿರುವ ಬಾಗಿಲಿನ ಸೂಚನೆ ಇತರರಿಗಿತ್ತ.

ಧಾಳಿಕೋರರ ಗುಂಪಿನ ನಾಯಕ "ಮೊದಲು ರೂಂ ಕ್ಲಿಯರ್ ಮಾಡಿ, ಆಮೇಲೆ ಆಚೆ" ಎಂದ. ಮತ್ತೆ ಬಾಗಿಲು ಬಡಿದಾಟ, ಎಲ್ಲೆಡೆಯಿಂದ "ಕ್ಲಿಯರ್" ಎಂಬ ಕೂಗು.

ಅಷ್ಟರಲ್ಲಿ "ಯಾರೂ ಇದನ್ನು ಮುಟ್ಟಬೇಡಿ. ನಂಬರ್ ಥ್ರೀ, ಸೇಫ್ ಬಾಕ್ಸ್ ತೊಗೊಂಡು ಬಾ" ಎಂಬ ನಾಯಕನ ಕೂಗು.

ಇತ್ತ ಹುಡುಗಿ ಅದನ್ನು ಕೇಳಿ "ಶಕುನಿ ಅವರಿಗೆ ಸಿಕ್ಕಿರಬೇಕು. ಅದು ಏನೇ ಕಾರಣಕ್ಕೂ ಅವರ ಕೈಸೇರಬಾರದು" ಪಿಸುಗುಟ್ಟಿದಳು.

"ಅವರು ಆರು ಮಂದಿ. ಎಲ್ಲರ ಹತ್ತಿರ ಗನ್-ರೈಫಲ್‍ಗಳಿವೆ. ನಾವಿಬ್ಬರೇ. ನೋ ಫೈಯರ್‌ಆರ್ಮ್ಸ್. ಮೇಲಾಗಿ ನಿಮಗೆ ಇಂಜುರಿಯಾಗಿದೆ. ಅದರ ಹಿಂದೆ ಹೋಗೋದು ಸುಯಿಸೈಡ್"

"ನಿಮಗರ್ಥವಾಗ್ತಿಲ್ಲ. ಇದು ನ್ಯಾಶನಲ್ ಸೆಕ್ಯೂರಿಟಿ ವಿಷಯ" ಎನ್ನುತ್ತ ಹುಡುಗಿ ಎದ್ದು ಹೊರಟಳು.

ಅವಳು ಖಳನೊಬ್ಬನ ಕಣ್ಣಿಗೆ ಬಿದ್ದಾಗ ಅವನು ಕೂಗುತ್ತ ಅವಳ ಕಡೆ ಗುಂಡು ಹಾರಿಸಿದ. ಅದೇ ಕ್ಷಣದಲ್ಲಿ ಆದಿತ್ಯ ಹುಡುಗಿಯನ್ನು ಕೆಳಕ್ಕೆಳೆದು ಬೀಳಿಸಿದರಿಂದ ಅವಳ ಪ್ರಾಣ ಉಳಿಯಿತು. ಸರಸರನೇ ಅವಳನ್ನೂ ಎಳೆದುಕೊಂಡು ಸ್ವಲ್ಪ ದೂರ ಹೋಗಿ ಮತ್ತೆ ಪೊದೆಗಳಲ್ಲಿ ಕೂತರು.

"ನಿಮಗೆ ನಾಹೇಳಿದ್ದು ಅರ್ಥವಾಗಲಿಲ್ಲ..." ಎಂದು ಶುರು ಮಾಡಿದಳು ಹುಡುಗಿ.

ಅವಳ ಹಿಂದೆ ಹೋಗಿ, ಅವಳ ಸುತ್ತ ಕೈಹಾಕಿ, ಅವಳ ಬಾಯಿ ತನ್ನ ಕೈಯಿಂದ ಮುಚ್ಚಿ ಆದಿತ್ಯ ಅವಳ ಕಿವಿಯಲ್ಲಿ ಹೇಳಿದ. "ಎರಡು ಸರ್ತಿ ಹೇಗೋ ಬದುಕಿಕೊಂಡಿದ್ದೀರಿ. ಇನ್ನೊಮ್ಮೆ ಹೋದರೆ ನೀವಷ್ಟೇ ಅಲ್ಲ ನನ್ನನ್ನೂ ಬಲಿ ತೊಗೊತೀರ. ಸ್ವಲ್ಪ ಸೈಲೆಂಟಾಗಿರಿ"

ನಾಲ್ಕು ಜನ ಖಳರು ಪೊದೆಗಳಲ್ಲಿ ಹುಡುಗಿಯನ್ನು ಹುಡುಕುತ್ತಿದ್ದಂತೆ ಅತ್ತ ಕಾರೊಂದರ ಬಾಗಿಲು ಹಾಕಿದ ಶಬ್ಧ. ಕಾರು ಸ್ಟಾರ್ಟ್ ಮಾಡಿ ಯಾರೋ ವೇಗವಾಗೆ ಚಲಿಸತೊಡಗಿದರು.

"ಅವರು ಶಕುನಿಯನ್ನು ತೊಗೊಂಡು ಹೋಗ್ತಿದ್ದಾರೆ" ಆತಂಕದಿಂದ ಹುಡುಗಿ ಹೇಳಿದಳು

"ನೀವೀಗ ಸುಮ್ಮನೆ ಇರದಿದ್ದರೆ ನಮ್ಮಿಬ್ಬರ ಪ್ರಾಣವನ್ನೂ ತೊಗೊಂಡು ಹೋಗ್ತಾರೆ"

ಒಂದೆರಡೇ ನಿಮಿಷಗಳಲ್ಲಿ ಹೆಲಿಕಾಪ್ಟರ್‌ನ ಥಕ್-ಥಕ್-ಥಕ್ ಶಬ್ಧ ಕೇಳಿಸಿತು. ಹುಡುಗಿ ಫೋನ್ ತೆಗೆದು ಮಾತನಾಡತೊಡಗಿದಳು. ಹೆಲಿಕಾಪ್ಟರ್ ಒಳಗಿನವರು ದುಷ್ಟರ ಮೇಲೆ ಗುಂಡುಗಳನ್ನು ಹಾರಿಸಿ ಅವರ ಆಹುತಿ ತೆಗೆದುಕೊಂಡರು.

"ಯೆಸ್! ಯೆಸ್! ಸಿಯರ ಆಬ್ಜೆಕ್ಟ್‌ಅನ್ನು ಯಾರೋ ಕಾರಿನಲ್ಲಿ ತೊಗೊಂಡು ಹೋಗ್ತಿದ್ದಾರೆ. ಈಗ ಕೆಲವೇ ನಿಮಿಷಗಳಲ್ಲಿ ಕಾರು ಇಲ್ಲಿಂದಲೇ ಹೊರಟಿದೆ. ಅದನ್ನು ರಿಕವರ್ ಮಾಡೋದು ತುಂಬ ಮುಖ್ಯ!" ಹುಡುಗಿ ಫೋನಿನೊಳಕ್ಕೆ ಕೂಗುತ್ತಿದ್ದಳು.

ಹೆಲಿಕಾಪ್ಟರ್ ಕಾರನ್ನು ಹುಡುಕಲು ಹಾರಿ ಹೋಗಿ, ಅರ್ಧ ಘಂಟೆಯ ನಂತರ ಹಿಂತಿರುಗಿ ನೆಲಕ್ಕಿಳಿಯಿತು. ಅಷ್ಟರಲ್ಲಿ ಆದಿತ್ಯ ಮತ್ತು ಹುಡುಗಿ ಗುಂಡುಗಳಿಂದ ಚಿಂದಿಯಾಗಿದ್ದ ಕೋಣೆಯೊಳಗೆ ಈಕ್ಷಿಸಿ, ’ಶಕುನಿ’ ಅಲ್ಲಿಲ್ಲವೆಂದು ಖಾತ್ರಿ ಮಾಡಿಕೊಂಡಿದ್ದರು.

"ಸಾರಿ ಬೇಟ-ಟ್ಯಾಂಗೋ. ಫಿಫ್ಟಿ ಮೈಲ್ಸ್ ರೇಡಿಯಸ್‍ನಲ್ಲಿ ಹುಡುಕಿದೆವು. ಯಾವ ಕಾರೂ ಕಾಣಿಸಲಿಲ್ಲ" ಏರ್‌ಫೊರ್ಸ್ ಯೂನಿಫಾರ್ಮ್ ಧರಿಸಿದ್ದ ವ್ಯಕ್ತಿಯೊಬ್ಬ ಹೆಲಿಕಾಪ್ಟರ್‌ನಿಂದ ಇಳಿದು ಬಂದು ಹುಡುಗಿಗೆ ಹೇಳಿದ. "ಹೂ ಇಸ್ ದಿಸ್?" ಆದಿತ್ಯನನ್ನು ತೋರಿಸಿ ಕೇಳಿದ.

"ನನ್ನ ಪ್ರಾಣ ಉಳಿಸಿದವರು. ಈವರನ್ನು ಡಿಬ್ರೀಫ್ ಮಾಡಬೇಕು; ಇವರೂ ನನ್ನ ಜೊತೆ ಬರುತ್ತಾರೆ. ಕಂಟ್ರೋಲ್ ನನಗಾಗಿ ಒಂದು ಜೆಟ್ ಬಗ್ಡೋಗ್ರ ಬೇಸ್‍ನಲ್ಲಿ ಕಾದಿರಿಸಿದೆ. ವಿ ನೀಡ್ ಎ ರೈಡ್ ಟು ಬಗ್ಡೋಗ್ರ" ಆದಿತ್ಯನ ಕಡೆ ತಿರುಗಿ "ಪ್ಲೀಸ್" ಎಂದು ಕೇಳಿಕೊಂಡಳು

"ಕಂಟ್ರೋಲ್ ನಿಮ್ಮ ರೈಡ್ ಕ್ಲಿಯರ್ ಮಾಡಿದ್ದಾರೆ. ಲೆಟ್ಸ್ ಗೋ" ಎಂದಂತೆ ಮೂವರೂ ಹೆಲಿಕಾಪ್ಟರ್ ಹತ್ತಿದರು. ಯೂನಿಫಾರ್ಮ್‌ಧಾರಿ ಮುಂದೆ ಪೈಲಟ್ ಜೊತೆ ಕೂತ. ಆದಿತ್ಯ ಮತ್ತು ಹುಡುಗಿ ಇಬ್ಬರೂ ಹಿಂದೆ ಕೂತರು. ಕೆಲವೇ ಕ್ಷಣಗಳಲ್ಲಿ ಗಾಳಿಯಲ್ಲಿ ತೇಲುತ್ತ ಬಗ್ಡೋಗ್ರ ಕಡೆ ಹೊರಟರು.

"ಥ್ಯಾಂಕ್ಸ್! ನನ್ನ ಪ್ರಾಣ ಕಾಪಾಡಿದ್ದಕ್ಕೆ" ಹುಡುಗಿಯ ಧ್ವನಿ ಕೇಳಿ ಆದಿತ್ಯ ಅವಳ ಕಡೆ ತಿರುಗಿದ.

"ನೋ ಪ್ರಾಬ್ಲಮ್" ಎನ್ನುತ್ತ ಕೈಚಾಚಿ "ನಾನು ಆದಿತ್ಯ"

"ಓಹ್! ಸಾರಿ! ನನ್ನ ಜ್ಞಾನ ಎಲ್ಲೋ ಇದೆ. ನಾನು ಅನು...ಅನುರಾಧಾ" ಎನ್ನುತ್ತ ಆದಿತ್ಯನ ಕೈಕುಲುಕಿದಳು. "ಸಮಯಕ್ಕೆ ಸರಿಯಾಗಿ ಒಂದಲ್ಲ, ಎರಡಲ್ಲ, ಮೂರು ಸರ್ತಿ ನನ್ನನ್ನ ಕಾಪಾಡಿದೀರ"

"ನೋ ಬಿಗ್ ಡೀಲ್"

"ಸಧ್ಯಕ್ಕೆ ದೊಡ್ಡ ಸಿಚುಯೇಶನ್ ಮಧ್ಯೆ ಸಿಕ್ಕಿಹಾಕಿಕೊಂಡಿದ್ದೇವೆ. ನಿಮ್ಮನ್ನು ಶಕುನಿ ವಿಚಾರವಾಗಿ ಪ್ರಶ್ನೆಗಳನ್ನು ಕೇಳಬೇಕು’

ಆದಿತ್ಯ ತಬ್ಬಿಬ್ಬಾಗಿ ಅವಳನ್ನು ನೋಡಿದ.

"ನೆನಪಿಸಿಕೊಳ್ಳಿ ಪ್ಲೀಸ್. ಶಕುನಿ ಜೊತೆ ಇಂಟರ‍್ಯಾಕ್ಟ್ ಮಾಡಿದವರಿಗೆ ಅದರ ವಿಚಾರವೆಲ್ಲ ಮರೆತು ಹೋಗುತ್ತೆ. ನಿಮ್ಮ ಮನಸ್ಸಿನಲ್ಲಿ ಫ್ರೆಶ್‍ಆಗಿದ್ದಾಗ ಹೇಳಿದರೆ ಉಂಟು"

ಆದಿತ್ಯ ಇನ್ನೂ ಅನುರಾಧಾಳನ್ನು ಆಕೆ ತಲೆಯ ಮೇಲೆ ಎರಡು ಕೊಂಬು ಬೆಳೆದಂತೆ ನೋಡುತ್ತಿದ್ದ

"ಗಾಜಿನ ಗುಂಡು. ಕ್ರಿಕೆಟ್‍ಬಾಲ್ ಸೈಜು. ಮಬ್ಬುನೀಲಿ ಬೆಳಕು" ಆದಿತ್ಯನ ಪದಗಳನ್ನೇ ಅವನಿಗೆ ನೆನಪಿಸಿದಳು ಅನು.

"ಓಹ್! ನೀತಾ!" ಎಂದ ಆದಿತ್ಯ.

"ನೀತಾ...ನಿಮ್ಮ ಫ್ರೆಂಡಾ?"

"ಹೂಂ...ಬಹಳ ವರ್ಷಗಳ ಹಿಂದೆ. ಬೆಂಗಳೂರಲ್ಲಿ. ನೀತಾ ಜೊತೆ ಮಾತನಾಡಿದ ನೆನಪು" ಆದಿತ್ಯನ ಕಣ್ಣುಗಳು ಎಲ್ಲೋ ದೂರ ನೋಡುತ್ತಿದ್ದವು. "ಆದರೆ...ಆದರೆ ಇಲ್ಲಿ?"

"ಓಹ್...ನೀವು ಬೆಂಗಳೂರಿನವರಾ?"

"ಹೂಂ"

ಅನುರಾಧಾ ಕನ್ನಡದಲ್ಲಿ ಮಾತನಾಡುತ್ತ "ನಮ್ಮೂರೂ ಬೆಂಗಳೂರೇ...ನೀತಾ ಜೊತೆ ಏನು ಮಾತನಾಡಿದಿರಿ ನೆನಪಿಸಿಕೊಳ್ಳಿ?"

ಅನುರಾಧಾಳ ಉತ್ತೇಜನೆಯಿಂದ ಆದಿತ್ಯ ಒಂದೊಂದಾಗಿ ವಿಚಾರಗಳನ್ನು ನೆನಪಿಸಿಕೊಂಡು ಅವಳಿಗೆ ಹೇಳಿದ.

"ಮತ್ತೇನಾದರೂ ವಿಚಾರ ಮರೀತಿದ್ದೀರ? ಇದು ತುಂಬಾ ಇಂಪಾರ್ಟೆಂಟ್" ಎಂದಳು ಅನು.

"ಉಹೂಂ...ಇನ್ನೇನೂ ನೆನಪು ಬರ್ತಾಯಿಲ್ಲ...ಹಾಂ...8? 18? ಮಲ್ಲೇಶ್ವರಂ. ಏನೋ ಒಂದು ಅಡ್ರಸ್ ಅನ್ಸುತ್ತೆ, ನೆನಪಾಗ್ತಾ ಇಲ್ಲ"

"ನಂಬರ್188, 19ನೇ ಕ್ರಾಸ್ ಮಲ್ಲೇಶ್ವರಂ, ಬೆಂಗಳೂರು"

"ರೈಟ್! ರೈಟ್!! ಅದೇಯ"

"ಒ‍ಮೈಗಾಡ್! ಆದಿತ್ಯ, ನಾನಾಗಲೇ ಹೇಳಿದಂತೆ ಇದು ನ್ಯಾಶನಲ್ ಸೆಕ್ಯೂರಿಟಿ ವಿಚಾರ. ನಿಮ್ಮ ಡಿಬ್ರೀಫಿಂಗ್ ಇನ್ನೂ ಮುಗಿದಿಲ್ಲ. ಮೇಲಾಗಿ ಶಕುನಿ ನಿಮಗೆ ಆ ಆಡ್ರಸ್ ಕೂಡ ಹೇಳಿದೆಯಂದರೆ ಏನೋ ನಡೀತಾ ಇದೆ. ನಿಮ್ಮ ಸಹಾಯನೂ ಬೇಕಾಗಬಹುದು, ಸೋ, ನೀವು ನನ್ನ ಜೊತೆ ಬೆಂಗಳೂರಿಗೆ ಬರಬೇಕು ಅಂತ ಕೇಳ್ಕೊತೀನಿ"

ಆದಿತ್ಯನ ಮುಖ ಕಠಿಣವಾಯಿತು. ಆದರೂ ಅನುರಾಧಾಳ ಕಡೆ ಅದೇನೋ ಆಕರ್ಶಣೆ. "ಓಕೆ...ಓಕೆ, ಬಟ್ ಐ ಎಕ್ಸ್‍ಪೆಕ್ಟ್ ಆನ್ಸರ್ಸ್" ಎಂದ.

***

"ತೊಗೊಳಿ, ಇದನ್ನು ಒಮ್ಮೆ ಓದಿ. ಶಕುನಿ ಜೊತೆ ಮಾದಿದ ಇಂಟರ‍್ಯಾಕ್ಷನ್ ಯಾರಿಗೂ ನೆನಪಿರೋದಿಲ್ಲ. ಇದನ್ನು ಓದಿಯಾದರೂ ಮತ್ತೇನಾದರೂ ನೆನಪಾಗಬಹುದು" ಎಂದು ಅನುರಾಧಾ ಒಂದು ರೈಟಿಂಗ್ ಪ್ಯಾಡನ್ನು ಆದಿತ್ಯನ ಕೈಗೆ ಕೊಟ್ಟಳು.

ಸ್ವಲ್ಪ ಹೊತ್ತಿನ ಹಿಂದೆ ಇಬ್ಬರೂ ಬಗ್ಡೋಗ್ರ ಏರ್‌ಬೇಸ್‍ನಲ್ಲಿ ಹೆಲಿಕಾಪ್ಟರ್‌ನಿಂದಿಳಿದು, ಅಲ್ಲೇ ಆಫಿಸರ್ಸ್ ಮೆಸ್‍ನಲ್ಲಿ ಸ್ನಾನ-ಭೋಜನಾದಿಗಳನ್ನು ಮಾಡಿ, ಅನುರಾಧಾಳ ಗಾಯಗಳಿಗೆ ಬೇಸ್ ಹಾಸ್ಪೆಟಲ್‍ನಲ್ಲಿ ಬ್ಯಾಂಡೇಜ್ ಹಾಕಿಸಿಕೊಂಡು, ಡಕ್ಟರ್ ಇನ್ನೂ ಕೆಲವು ಟೆಸ್ಟ್ ಮಾಡಬೇಕೆಂದರೂ ಡಿಸ್ಚಾರ್ಜ್ ಮಾಡಿಸಿಕೊಂಡು ಕಾಯುತ್ತಿದ್ದ ಏರ್‌ಫೋರ್ಸ್ ಜೆಟ್ ಹತ್ತಿ ಬೆಂಗಳೂರಿಗೆ ರವಾನೆಯಾಗಿದ್ದರು.

ಆದಿತ್ಯ ಪ್ಯಾಡ್ ಪಕ್ಕಕ್ಕಿಟ್ಟು, "ಆಮೇಲೆ ನೋಡ್ತೀನಿ. ಮೊದಲು ನೀವು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ" ಎಂದ.

ಅನು ನಿಟ್ಟುರ್ಸಿರೆಳೆದು "ನಾನು ಹೇಳೋದೆಲ್ಲ ಹೈಲಿ ಕ್ಲಾಸಿಫೈಡ್. ನಿಮಗೆ ಎಲ್ಲವನ್ನೂ ಹೇಳಲೇಬಾಕಾದ ಸಂದರ್ಭ ಒದಗಿಬಂದಿದೆ...ಏನಿದ್ದರೂ ಕೇಳಿ ಹೇಳ್ತೀನಿ"

"ಏನಿದು ’ಶಕುನಿ’?"

"ಸ್ವಿಟ್ಸರ್‌ಲ್ಯಾಂಡ್‍ನಲ್ಲಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ಅಥವ LHC ಇರೋದು ನಿಮಗೆ ಗೊತ್ತೇಯಿರಬಹುದು. ಜಗತ್ತಿನ ಅತ್ಯಂತ ಹೈ ಎನರ್ಜಿ ಪಾರ್ಟಿಕಲ್ ಆಕ್ಸೆಲರೇಟರ್. ಈ 27 ಕಿಲೋಮೀಟರ್ ಉದ್ದವಾಗಿರುವ ಟನಲ್‍ಅನ್ನು 2008ರಲ್ಲಿ ಯುರೋಪಿಯನ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯಾದ ಕಾನ್ಸೀಲ್ ಯೂರೋಪೀನ್ ಪೂರ್‌ಲ ರೆಶರ್ಚ್ ನ್ಯೂಕ್ಲಿಯೇರ್ ಅಥವ CERN ಕಟ್ಟಿ ಮುಗಿಸಿದರು. ಇದಕ್ಕೆ ಪ್ರಪಂಚಾದ್ಯಂತ ನೂರಕ್ಕೂ ಹೆಚ್ಚು ದೇಶಗಳಿಂದ 600ಕ್ಕೂ ಹೆಚ್ಚು ಸಂಸ್ಥೆಗಳು, 10000 ಸೈಂಟಿಸ್ಟ್-ಇಂಜೀನಿಯರ್‌ಗಳು ಕೆಲಸ ಮಾಡಿದ್ದಾರೆ. ಅವುಗಳಲ್ಲಿ ಇನ್ಸ್‍ಟಿಟ್ಯೂಟ್ ಕೂಡ ಒಂದು.

"LHC ಒಳಗೆ ಸೂಪರ್‌ಕಂಡಕ್ಟಿಂಗ್ ಮ್ಯಾಗ್ನೆಟ್‍ಗಳ ಸಹಾಯದಿಂದ ಪರಮಾಣು ಕಿರಣಗಳು ಅಥವ ಪಾರ್ಟಿಕಲ್ ಬೀಮ್‍ಗಳನ್ನು, ಆಕ್ಸೆಲರೇಟ್ ಮಾಡಿಸಿ ಪರಮಾಣುಗಳನ್ನು ಒಂದಕ್ಕೊಂದು ಢಿಕ್ಕಿ ಹೊಡೆಸುವ ಪ್ರಯೋಗಗಳನ್ನು ಮಾಡಬಹುದು. ಈ ಪ್ರಯೋಗಗಳಿಂದ ಪಾರ್ಟಿಕಲ್ ಫಿಸಿಕ್ಸ್ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್‍ನ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುವ ಆಶಯವಿದೆ.

"ಸಪ್ಟಂಬರ್ 2009ರಲ್ಲಿ ಇದನ್ನು ಮೊದಲ ಬಾರಿ ಸ್ವಿಚ್‍ಆನ್ ಮಾಡಲಾಯಿತು. ಜನ ಇದರಿಂದ ವರ್ಮ್‍ಹೋಲ್‍ಗಳಾಗಿ, ಔಟರ್‌ಸ್ಪೇಸ್‍ನಿಂದ ಭೂಮಿಗೆ ಸುರಂಗಮಾರ್ಗಗಳಾಗಿ, ಏಲಿನ್ಸ್ ಭೂಮಿಗಿಳಿಯಬಹುದು ಅಂತೆಲ್ಲ ಗಾಳಿಸುದ್ಧಿ ಹಬ್ಬಿಸಿದ್ದರು. ಆದರೆ CERN ಮತ್ತೆ ಇನ್ಸ್‍ಟಿಟ್ಯೂಟ್‍ನ ಥಿಯರೆಟಿಕಲ್ ಫಿಸಿಕ್ಸ್ ಡಿಪಾರ್ಟ್ಮೆಂಟ್ ಸೈಂಟಿಸ್ಟ್‍ಗಳು ಸೀಮಿತವಾಗಿ ಕಂಟ್ರೋಲ್ಡ್ ವರ್ಮ್‍ಹೋಲ್ ತೆಗೆಯಬಹುದೆಂದು ಥಿಯರೈಜ್ ಮಾಡಿದ್ದರು.

"ಅದರಂತೆ, ಇನ್ಸ್‍ಟಿಟ್ಯೂಟ್‍ನಲ್ಲಿ ಒಂದು ಹೊಸ ಅಂಡರ್‌ಗ್ರೌಂಡ್ ಲ್ಯಾಬ್ ಕಟ್ಟಿಸಿ ಅದರೊಳಗೆ CERNನಿಂದ ಬಂದ ಎಕ್ವಿಪ್ಮೆಂಟ್ ಇನ್ಸ್‍ಟಾಲ್ ಮಾಡಿದರು. ಅಕ್ಟೋಬರ್ 2009ರಲ್ಲಿ, ಇನ್ಸ್‍ಟಿಟ್ಯೂಟ್‍ನ ಮೊದಲ ಪ್ರಯೋಗ ಶುರು ಮಾಡಿದೆವು. ನಮ್ಮ ಥಿಯರಿಯ ಪ್ರಕಾರ LHC ಮತ್ತು ಇನ್ಸ್‍ಟಿಟ್ಯೂಟ್ ಲ್ಯಾಬ್ರೆಟೋರಿಗಳ ಮಧ್ಯೆ ಒಂದು ವರ್ಮ್‍ಹೋಲ್ ತೆರೆದುಕೊಳ್ಳುವುದಿತ್ತು.

"ವರ್ಮ್‍ಹೋಲ್ ಎಂದರೆ ಸ್ಪೇಸ್-ಟೈಮ್ ಕಂಟಿನುಅಮ್‍ನಲ್ಲಿ ಛೇಧಗಳಂತೆ. ಅಂದರೆ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುರಂಗ-ಅಲ್ಲಲ್ಲ...ಬಾಗಿಲು ಇದ್ದಂತೆ. ಸ್ಥಳಗಳಲ್ಲಿ ಸಾವಿರಾರು...ಲಕ್ಷಾಂತರ...ಅಸಂಖ್ಯಾತ ಮೈಲಿಗಳ ಅಂತರವಿರಬಹುದು. ವರ್ಮ್‍ಹೋಲ್ಗಳು ಸ್ಪೇಸ್-ಟೈಮ್‍ಗೆ ಜೋಡಿಕೊಂಡಿವೆಯಾದ್ದರಿಂದ ಕೇವಲ ಸ್ಥಳವಷ್ಟೇ ಅಲ್ಲ ಸಮಯದಲ್ಲೂ ಅಂತರವಿರಬಹುದು-ಅಂದರೆ ಇಂದಿನಿಂದ 1960ಗೋ ಅಥವ 2050ಗೋ-ಯಾವ ಸಮಯಕ್ಕೆ, ಸ್ಥಳಕ್ಕೆ ಬೇಕಾದರೂ ಹೋಗುವ ಬಾಗಿಲಾಗಿರಬಹುದು. ಆಕಡೆಯಿಂದ ವರ್ಮ್‍ಹೋಲ್ ಒಳಗೆ ಏನಾದರೂ ಹಾಕಿದರೆ ಆ ವಸ್ತು ಅದೇ ಕ್ಷಣದಲ್ಲಿ ಈ ಕಡೆ ಬಂದು ಸೇರುವುದು. ಈ ಕಡೆಯಿಂದ ಹಾಕಿದರೆ ಅದೇ ಕ್ಷಣದಲ್ಲಿ ಆಕಡೆ ಸೇರುವುದು.

"ನಿಜ ಜೀವನದಲ್ಲಿ ಇದರ ಉಪಯೋಗಗಳು ಅಪಾರ. ಆದರೆ ನಿಜವಾಗಿ ವರ್ಮ್‍ಹೋಲ್ ತೆರೆದುಕೊಳ್ಳುವುದೇ? ತೆರೆದರೆ, ವಸ್ತುಗಳು ಇತ್ತಲಿಂದತ್ತ, ಅತ್ತಲಿಂದಿತ್ತ ಕ್ಷೇಮವಾಗಿ ಬರುವವೇ? ಕೇವಲ ವಸ್ತುಗಳಿಗೇ ಸೀಮಿತವೇ ಅಥವ ಜೀವಿಗಳೂ ಹಾಗೇ ಹೋಗಬಹುದೇ? ಈ ರೀತಿಯೆಲ್ಲ ಪ್ರಶ್ನೆಗಳು ಎದ್ದಿದ್ದವು. ಇಲ್ಲಿಯವರೆಗೆ ವರ್ಮ್‍ಹೋಲ್‍ಗಳನ್ನು ಖುದ್ದಾಗಿ ಕಂಡಿರಲಿಲ್ಲ. ಥಿಯರಿಯಾಗಿಯೇ ಉಳಿದಿತ್ತು.

"ತುಂಬಾ ಡೀಟೇಲ್ಸ್‍ಗೆ ಹೋಗೋದಿಲ್ಲ, ಆದರೆ ಎಕ್ಸ್‍ಪರಿಮೆಂಟ್ ಮುಗಿದ ಮೇಲೆ CERN ಕಡೆ ಏನೂ ತೆರೆದುಕೊಳ್ಳಲಿಲ್ಲ. ಇನ್ಸ್‍ಟಿಟ್ಯೂಟ್ ಕಡೆ ವರ್ಮ್‍ಹೋಲ್ ತೆರೆದುಕೊಂಡಿತು. ಆದರೆ CERN‍ಗೆ ಹೋಗೋ ಬದಲು ಆ ವರ್ಮ್‍ಹೋಲ್ ಬೇರೆಲ್ಲೋ ಹೋಗ್ತಿತ್ತು. ಎಲ್ಲಿಗೆ ನಮಗಿನ್ನೂ ಗೊತ್ತಿಲ್ಲ. ಮೇಲಾಗಿ ಆ ವರ್ಮ್‍ಹೋಲ್ ಯೂನಿಡೈರೆಕ್ಷನಲ್, ಅಂದರೆ ಆ ಕಡೆಯಿಂದ ನಮ್ಮ ಕಡೆಗೆ ವಸ್ತುಗಳು ಬರುತ್ತವೆಯೇ ಹೊರತು, ನಾವು ಅದರೊಳಗೆ ಏನು ಹಾಕಿದರೂ ಅದು ಆ ಕಡೆ ಹೋಗೋದಿಲ್ಲ. ಇಲ್ಲೇ ಇರುತ್ತೆ. ವರ್ಮ್‍ಹೋಲ್ ತೆಗೆಯಲು ಹೊರಟ ವಿಚಾರವಾಗಲಿ, ಅದು ಎಲ್ಲೋ ಗೊತ್ತಿಲ್ಲದಿರುವಲ್ಲಿಗೆ ತೆರೆದುಕೊಂಡಿರೋ ವಿಚಾರವಾಗಲಿ ಜನರಿಗೆ ಗೊತ್ತಾದರೆ ಕೋಲಾಹಲವಾದೀತೆಂದು ಈ ವಿಚಾರವನ್ನು ಸೀಕ್ರೆಟ್‍ಆಗಿಯೇ ಇಡಲಾಗಿದೆ.

"ಆ ಕಡೆಯಿಂದ ಹಲವಾರು ಆಬ್ಜೆಕ್ಟ್‍ಗಳು ಬಂದಿವೆ. ಕೆಲವು ಆಬ್ಜೆಕ್ಟ್‍ಗಳ ಉಪಯೋಗ ನಮಗೆ ಗೊತ್ತಿಲ್ಲ; ಹಲವಾರು ಪೇಪರ್‌ಗಿಂತ ತೆಳವು, ಹಗುರ, ಆದರೆ ಬಗ್ಗಿಸಲು/ಮುರಿಯಲಸಾಧ್ಯವಾದಂತಹ ವಸ್ತುಗಳು, 250ಕಿಲೋ ಭಾರವಿರುವ ಇಟ್ಟಿಗೆ ಗಾತ್ರದ ವಸ್ತುಗಳು. ಇನ್ನೂ ಕೆಲವು ಗಾಳಿಯಲ್ಲಿ ತೇಲಿಹೋಗುವಂತಹ ಹಗ್ಗದ ತುಂಡುಗಳು, ಇವುಗಳಿಗೆ ಗ್ರ್ಯಾವಿಟಿಯೇ ಇಲ್ಲ.

"ಕೆಲವೊಂದು ಆಬ್ಜೆಕ್ಟ್‍ಗಳ ಉಪಯೋಗಗಳನ್ನು ಪ್ರಯೋಗಗಳಿಂದ ತಿಳಿದುಕೊಂಡಿದ್ದೇವೆ. ಒಮ್ಮೆ ಒಂದು ಡಬ್ಬಿ ಬಂದಿತ್ತು. ಅದರೊಳಗೆ ಏನೇ ಇಟ್ಟರೂ ಕೆಲವೇ ಕ್ಷಣಗಳಲ್ಲಿ ಅದೇ ರೀತಿಯ ಮತ್ತೊಂದು ನಕಲು ವಸ್ತುವನ್ನು ತಯಾರ್ ಮಾಡುತ್ತೆ. ಇದು ಹೇಗೆ ಕೆಲಸ ಮಾಡುತ್ತೆ ನಮಗೆ ಗೊತ್ತಿಲ್ಲ. ಏನು ಮಾಡುತ್ತೆ ಗೊತ್ತು. ಶಕುನಿ ಇದೇ ರೀತಿಯ ಮತ್ತೊಂದು ಆಬ್ಜೆಕ್ಟ್.

"2010 ಆರಂಭದಲ್ಲಿ ಶಕುನಿ ವರ್ಮ್‍ಹೋಲ್‍ಒಳಗಿನಿಂದ ಬಂತು. ಅದು ಬಹಳ ಡೇಂಜರಸ್ ಅಂತ ಮೊದಲಿಂದಲೇ ನಮಗೆ ಗೊತ್ತಿತ್ತು. ಅದನ್ನು ಮೊದಲು ಕೈಗೆತ್ತಿಕೊಂಡ ಸೈಂಟಿಸ್ಟ್ ಕಾರಣವಿಲ್ಲದೆ ಇಬ್ಬರು ಟೆಕ್ನಿಶ್ಯನ್‍ಗಳನ್ನು ಅಟ್ಯಾಕ್ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ. ಚಾಡಿ ಚುಚ್ಚಿ ಜಗಳ ಮಾಡಿಸುತ್ತೆಯಂತ ಯಾರೋ ಅದಕ್ಕೆ ’ಶಕುನಿ’ ಅನ್ನುವ ಹೆಸರಿಟ್ಟರು.

"ಶಕುನಿಯನ್ನು ಹಿಡಿದವರು ಒಂದು ತರಹ ಡ್ರೀಮ್‍ಸ್ಟೇಟ್ ಅಂದರೆ ಸ್ವಪ್ನಾವಸ್ಥೆಗೆ ಹೋಗಿಬಿಡುತ್ತಾರೆ. ಆ ಪರಿಸ್ಥಿತಿಯಲ್ಲಿ ಶಕುನಿ ತನ್ನನ್ನು ಹಿಡಿದವರ ಕೈಯಲ್ಲಿ ಏನು ಬೇಕಾದರೂ ಮಾಡಿಸುತ್ತೆ. ವಿಚಿತ್ರವೇನೆಂದರೆ ಮಾಡಿದವರಿಗೆ ಅದು ಕನಸು ಕಂಡಂತೆ ಇರುತ್ತೆ. ತಕ್ಷಣ ನೆನಪಿಸಿಕೊಳ್ಳಲು ಪ್ರಯತ್ನಿಸಿದರೆ ಮಬ್ಬು ನೆನಪುಗಳು, ಸ್ವಲ್ಪ ಹೊತ್ತಾದಮೇಲೆ ಪೂರ್ತಿಯಾಗಿ ಮರೆತೇ ಹೋಗುತ್ತೆ.

"ಶಕುನಿಗೆ ಎಲ್ಲಾ ಗೊತ್ತು. ಪ್ರಪಂಚದಲ್ಲಿ-ಇಡೀ ಭೂಮಂಡಲದಲ್ಲಿ ಏನೇನು ನಡೆದಿದೆಯೋ, ನಡೆಯುತ್ತಿದೆಯೋ, ನಡೆಯುತ್ತದೆಯೋ ಎಲ್ಲವೂ ಎಲ್ಲಾವುದರ ಬಗ್ಗೆಯೂ, ಎಲ್ಲರ ಬಗ್ಗೆಯೂ ಸಂಪೂರ್ಣವಾಗಿ ಗೊತ್ತು. ಬೇ-ಆಫ್-ಬೆಂಗಾಲ್‍ನಲ್ಲಿ ಎಷ್ಟು ಮೀನುಗಳಿವೆ, ಊಟಿಯಲ್ಲಿ ಈ ಕ್ಷಣದಲ್ಲಿ ಎಷ್ಟು ಹೂವುಗಳು ಅರಳಿವೆ, ಒಂದೊಂದು ಹೂವಿಗೂ ಎಷ್ಟೆಷ್ಟು ಪಕಳಿಗಳಿವೆ, 10ಮೈಲಿ ವೇಗದಲ್ಲಿ ಗಾಳಿ ಬೀಸಿದರೆ ಎಷ್ಟು ಪಕಳಿ, ಎಷ್ಟು ಹೂವು ಉದುರಿಹೋಗುತ್ತವೆ ಎಲ್ಲಾ ಶಕುನಿಗೆ ಗೊತ್ತು. ಅಕಸ್ಮಾತ್ ಏನಾದರೂ ಒಂದು ಇವೆಂಟ್ ಬದಲಿಸಿದರೆ ಅದರಿಂದ ಭವಿಷ್ಯದಲ್ಲಿ ಏನೇನು ಬದಲಾವಣೆಗಳು ಆಗುತ್ತೆ, ಪ್ರತಿಯೊಂದು ಪರ್ಮ್ಯುಟೇಶನ್-ಕಾಂಬಿನೇಶನ್ ಶಕುನಿಗೆ ಗೊತ್ತು. ಇದು ಹೇಗೆಂದು ನಮಗೆ ಗೊತ್ತಿಲ್ಲ. ನಮಗೆ ಬೇಕಾಗಿರುವ ಸಮಾಚಾರವನ್ನು ಅದರ ಕೈಲಿ ಹೇಗೆ ಹೇಳಿಸೋದು ಅಂತಲೂ ನಮಗೆ ಗೊತ್ತಿಲ್ಲ. ಅದಕ್ಕೆ ಇಷ್ಟ ಬಂದಂತೆ ವಿಚಾರಗಳನ್ನು ಹೇಳುತ್ತೆ, ಹಿಡಿದವರನ್ನು ಗೊಂಬೆಯಂತೆ ಆಡಿಸುತ್ತೆ.

"ಹಿಡಿದವರನ್ನು ಅವರ ಗತಕಾಲದಲ್ಲಿ ಅವರ ಮೆಚ್ಚಿನ ಯಾ ಆಪ್ತರ ಧ್ವನಿಯಲ್ಲಿ ಮಾತನಾಡಿಸಿ ಅವರ ವಿಶ್ವಾಸ ಗಳಿಸುತ್ತೆ. ಒಮ್ಮೆ ಅವರ ನಂಬಿಕೆ ಗಳಿಸಿದಮೇಲೆ ಅವರ ಮನಸ್ಸಲ್ಲಿ ಪೊಸ್ಟ್-ಹಿಪ್ನಾಟಿಕ್-ಸಜೆಶನ್‍ನಂತೆ ಒಂದು ಸೂಚನೆ ಇಟ್ಟುಬಿಡುತ್ತೆ. ಅಂಥವರು ಅದರ ಹತ್ತಿರ ಇದ್ದರೆ ಅದಕ್ಕೆ ಬೇಕಾದಾಗ ಅದನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತೆ. ಇದನ್ನು ತಪ್ಪಿಸೋಕ್ಕೆ ಶಕುನಿಗಾಗಿ ಒಂದು ಕಬ್ಬಿಣ ಮತ್ತು ಲೆಡ್‍ನ ಸೇಫ್ ಮಾಡಿಸಿದ್ದೆವು." ಎಂದು ದೊಡ್ಡ ಕತೆ ಹೇಳಿ, ಅನುರಾಧ ತನ್ನ ಸೀಟಿನಲ್ಲಿ ಹಿಂದಕ್ಕೊರಗಿದಳು.

"ವಾವ್! ನಿಮಗೆ ಹೊಗಳಬೇಕೋ, ಬೈಬೇಕೋ ನನಗೆ ತಿಳೀತಾನೇಯಿಲ್ಲ" ಆದಿತ್ಯ ಉದ್ಗಾರ ತೆಗೆದ. "ಎನೀವೇ, ಶಕುನಿ ಮತ್ತೆ ನೀವು ಈ ಬಾರ್ಡರ್ ಏರಿಯಾನಲ್ಲಿ? ಮತ್ತೆ ಏರ್‌ಕ್ರ್ಯಾಶ್? ನಿಮ್ಮ ಅಟ್ಯಾಕರ್ಸ್? ಟಾರ್ಚರ್?"

ಅನು ಮತ್ತೆ ನಿಟ್ಟುಸಿರೆಳೆದು ಕತೆ ಮುಂದುವರೆಸಿದಳು. "CERN ಪ್ರಾಜೆಕ್ಟ್ ಹೊಸದಾಗಿದ್ದಾಗ ಅದರ ಟೀಮ್‍ಲೀಡ್ ಡಾ.ರಾಜನ್ ಆಗಿದ್ದರು..."

"ಓ...ಸುಂದರರಾಜನ್? ಪ್ರೊ.ಸತ್ಯರವರ ಮೆಚ್ಚಿನ ಪ್ರೊಟೀಜೀ?"

ಅನುಳ ಕಣ್ಣುಗಳು ದುಂಡಗಾದವು "ಸುಂದರರಾಜನ್ ನಿಮಗೆ ಗೊತ್ತಾ? ಪ್ರೊ.ಸತ್ಯ? ಓಹ್! ಓಹ್-ಡಾರ್ನ್! ನೀವು...ನೀವು ಅದೇ ಆದಿತ್ಯನಾ? ಪ್ರೊ.ಸತ್ಯ ಜೊತೆ ಜಗಳ ಮಾಡಿಕೊಂಡು...?"

ಆದಿತ್ಯ ತಲೆ ಬಾಗಿಸಿ "ಗಿಲ್ಟಿ ಆಸ್ ಚಾರ್ಜ್ಡ್. ಅಂದಹಾಗೆ ಈ ವಿಚಾರವಾಗಿಯೇ ನನ್ನ ಪ್ರೊ.ಸತ್ಯ ಮಧ್ಯೆ ಜಗಳವಾಗಿದ್ದು. ವರ್ಮ್‍ಹೋಲ್ ತೆರೆಯುವ ಟೆಕ್ನಾಲಜಿ ಇದ್ದರೂ ಅದನ್ನು ಕಂಟ್ರೋಲ್ ಮಾಡೋಕ್ಕೆ ಸಾಧ್ಯವಾಗೋದಿಲ್ಲಾಂತ ನನ್ನ ಥಿಯರಿ. ಆಗಿನ್ನೂ CERN ಪ್ರಾಜೆಕ್ಟ್ ಶುರುವಾಗಿರಲಿಲ್ಲ."

"ಓಮೈಗಾಡ್! ಇದೆಂತಹ ವಿಚಿತ್ರ ಕಾಕತಾಳೀಯ ವಿಚಾರ!"

"ಫರ್ಗೆಟ್‍ಇಟ್. ಆಮೇಲೆ ಏನಾಯಿತು?"

"ನೋ, ನೋ...ನಿಮಗೆ ಗೊತ್ತಾ? ವರ್ಮ್‍ಹೋಲ್ ತೆರೆದು ಅದರ ಮತ್ತೊಂದು ತುದಿ CERN‍ನಲ್ಲಿ ಇಲ್ಲವೆಂದು ಗೊತ್ತಾದ ಮರುದಿನ ಪ್ರೊ.ಸತ್ಯ ರಿಸೈನ್ ಮಾಡಿದರು"

ಆದಿತ್ಯ ತೃಪ್ತಿಯ ಮಂದಸ್ಮಿತೆ ಮುಖದಮೇಲೆ ಮೂಡಿಸಿಕೊಂಡು ಸೀಟಿನಲ್ಲಿ ಹಿಂದೊರಗಿದ.

ಅನು ಮುಂದುವರೆಸಿದಳು "ಎನೀವೇ, ರಾಜನ್ ಟೀಮ್‍ಲೀಡ್ ಆಗಿದ್ದರು. ಶಕುನಿ ಅವರ ಸಮಯದಲ್ಲೇ ವರ್ಮ್‍ಹೋಲ್‍ನಿಂದ ಹೊರಗೆ ಬಂದಿದ್ದು. ಶಕುನಿ ಜೊತೆ ಅವರೇ ಎಲ್ಲರಿಗಿಂತ ಹೆಚ್ಚು ಇಂಟರ‍್ಯಾಕ್ಟ್ ಮಾಡ್ತಿದ್ದಿದ್ದು. 2011ಮಾರ್ಚ್‍ನಲ್ಲಿ ಒಂದು ದಿನ ಶಕುನಿ, ಇನ್ನೂ ಕೆಲವು ವರ್ಮ್‍ಹೋಲ್‍ಆಬ್ಜೆಕ್ಟ್‍ಗಳನ್ನು ಎತ್ತಿಕೊಂಡು ಸೆಕ್ಯೂರಿಟಿ ದಾಟಿ ರಾಜನ್ ತಪ್ಪಿಸಿಕೊಂಡರು. ಎರಡು ವಾರಗಳ ಹಿಂದೆ ರಾಜನ್ 188, 19ನೇ ಕ್ರಾಸ್ ಮಲ್ಲೇಶ್ವರಂ‍ನಲ್ಲಿ ಬೇರೊಂದು ಲ್ಯಾಬ್ ಕಟ್ಟಿಕೊಂಡು ಅಲ್ಲಿ ಏನೋ ನಡಸ್ತಿದ್ದಾರೆ ಅಂತ ತಿಳೀತು. ಅಲ್ಲಿ ರೇಡ್ ಮಾಡಿದಾಗ ರಾಜನ್ ಶಕುನಿ ಸಹಾಯದಿಂದ ಹೇಗೋ ತಪ್ಪಿಸಿಕೊಂಡರು. ಹೇಳಿದೆನಲ್ಲ, ಶಕುನಿಗೆ ನಿಜವಾಗಿಯೂ ತ್ರಿಕಾಲಜ್ಞಾನಿ. ಅದರ ಸಹಾಯದಿಂದ ಏನುಬೇಕಾದರೂ ಮಾಡಬಹುದು.

"ಡೆಫೆನ್ಸ್ ಡಿಪಾರ್ಟ್ಮೆಂಟ್‍ಗೆ ಶಕುನಿ ವಿಚಾರ ತಿಳಿದು, ರಾಜನ್‍ಗಾಗಿ ದೊಡ್ಡ ಮ್ಯಾನ್‍ಹಂಟ್ ಶುರುಮಾಡಿದರು. ಮೊನ್ನೆ ರಿಸರ್ಚ್-ಅನ್ಯಾಲಿಸಿಸ್ ವಿಂಗ್‍ನಿಂದ ರಾಜನ್ ಭುಟಾನ್‍ನಲ್ಲಿ ಕಣ್ಮರೆಯಾಗಿದ್ದಾರೆಯೆನ್ನುವ ವಿಷಯ ತಿಳೀತು. ಡೆಫೆನ್ಸ್‍ನವರು ಒಂದು ಕಮಾಂಡೋ ಟೀಮ್ ಜೊತೆ ನಮ್ಮ ಈಗಿನ ಟೀಮ್‍ಲೀಡ್, ನಾನು, ಇನ್ನೂ ಹಲವು ಲ್ಯಾಬ್ ಜನರನ್ನು ಸೇರಿಸಿ ಭುಟಾನ್‍ಗೆ ಕಳಿಸಿದರು. ಈ ಸರ್ತಿ ರೇಡ್ ಮಾಡಿದಾಗ ರಾಜನ್ ತಪ್ಪಿಸಿಕೊಂಡರು, ಶಕುನಿ ನಮ್ಮ ಕೈಸೇರಿತು. ಶಕುನಿ ತೊಗೊಂಡು ವಾಪಸ್ ಬರ್ತಿದ್ದಾಗ ಏನಾಯಿತೋ ಗೊತ್ತಿಲ್ಲ. ಅಂತು ನಮ್ಮ ಪ್ಲೇನ್ ಕ್ರ್ಯಾಶ್‍ಆಯಿತು. ಅದೇ ಸ್ಥಳಕ್ಕೆ ಆ ವಿಲನ್‍ಗಳು ಬಂದಿದ್ದರು. ಪ್ಲೇನ್ ಒಳಕ್ಕೆ ನುಗ್ಗಿ ಎಲ್ಲರನ್ನೂ ಗುಂಡಿಟ್ಟು ಕೊಂದರು. ಆಮೇಲೆ...ಆಮೇಲೆ" ನಡೆದ ಸಂಗತಿಗಳನ್ನು ನೆನೆದು ಅನುಳ ಮುಖ ಸಪ್ಪಗಾಯಿತು. ಪಂಚರ್ ಮಾಡಿದ ಬಲೂನಿನಂತೆ ಸೀಟಿಗೆ ಕುಸಿದಳು. ಅವಳ ಕಣ್ಣುಗಳಿಂದ ಕಣ್ಣೀರು ಹರಿಯಲಾರಂಭಿಸಿತು.

ಆದಿತ್ಯ ಅವಳ ಹೆಗಲ ಸುತ್ತ ಕೈ ಹಾಕಿ "ದೇರ್, ದೇರ್. ಧೈರ್ಯ ತಂದುಕೊಳ್ಳಿ. ಥ್ಯಾಂಕ್‍ಫುಲಿ ನೀವು ಕ್ಷೇಮವಾಗಿದ್ದೀರ!".

ಅನು ಸ್ವಲ್ಪ ಹೊತ್ತಿನ ನಂತರ ಸಮಾಧಾನ ಮಾಡಿಕೊಂಡು ಆದಿತ್ಯನ ಹೆಗಲಿಗೆ ಒರಗಿ, ಕಣ್ಮುಚ್ಚಿ ನಿದ್ದೆ ಮಾಡಿದಳು.

***

ಸಂಜೆ 7:00ರ ಹೊತ್ತಿಗೆ ಯಲಹಂಕ ಏರ್‌ಬೇಸ್‌ನಲ್ಲಿ ಅನುರಾಧಾ-ಆದಿತ್ಯರ ಪ್ಲೇನ್ ಇಳಿಯಿತು. ಅವರಿಗಾಗಿ ಇನ್ಸ್‍ಟಿಟ್ಯೂಟಿನ ಕಾರ್ ಕಾದಿತ್ತು. ಆದಿತ್ಯನ ಒತ್ತಾಯದಮೇರೆಗೆ ಅನು ಕಾರನ್ನು ಪ್ರೊ.ಸತ್ಯನಾರಾಯಣರ ಮನೆ ಕಡೆ ತಿರುಗಿಸಲು ಹೇಳಿದಳು.

ಬಾಗಿಲ ಘಂಟೆ ಬಾರಿಸಿ, ಆದಿತ್ಯ ಬಾಗಿಲ ಮುಂದೆ ನಿಂತ.

"ಆದಿತ್ಯ...?! ಅನುರಾಧಾ? ಪ್ರೊಫೆಸರ್ ಸತ್ಯನಾರಾಯಣರು ಇಬ್ಬರನ್ನೂ ನೋಡಿ ಬೆರಗಾದರು.

ಗುರು-ಶಿಷ್ಯರ ಭಾವುಕ ಪುನರ್ಮಿಲನದ ನಂತರ ಸತ್ಯನಾರಾಯಣರು ಹೇಳಿದರು: "ಕಳೆದ ಕೆಲವು ವರ್ಷಗಳಿಂದ ಈ ದಿನ ಯಾವತ್ತು ಬರುತ್ತೆಯಂತ ಒಂದು ರೀತಿ ಭಯ, ಒಂದು ರೀತಿ ಹೆಮ್ಮೆಯಾಗ್ತಿತ್ತು. ಆವತ್ತು ನಡೆದ ವಾಗ್ವಾದಕ್ಕೆ ನನ್ನ ರಾಜೀನಾಮೆಯೇ ನನ್ನ ಪಶ್ಚಾತಾಪ. ನನ್ನ ಥಿಯರಿ ಸುಳ್ಳಾದ ಮರುದಿನವೇ ನಾನು ಆ ಕೆಲಸ ಕೈಬಿಟ್ಟೆ. ನೀನು ಬಂದು ’ನಾನು ಹೇಳಿರಲಿಲ್ಲವೇ’ ಅಂತ ಗ್ಲೋಟ್ ಮಾಡೋದು ಕೇಳಬೇಕು ಅಂತ ಹಂಬಲಿಸ್ತಿದ್ದೆ.

"ಏನೇ ಆಗಲಿ, ನೀನು ಎಲ್ಲವನ್ನೂ ಬಿಟ್ಟು ಈ ರೀತಿ ತಲೆ ಮರೆಸಿಕೊಂಡು ಹೋಗೋದು ನ್ಯಾಯವಾ? ನೀನು ಹೇಳಿದ್ದೇ ಸರಿಯಿರಬಹುದು, ಆದರೂ ನೀನು ನನ್ನ ಶಿಷ್ಯನೇ; ಮಗನಿಗಿಂತ ಹೆಚ್ಚಾಗಿ ನೋಡ್ತಿದ್ದೆ ಅಂತ ಎಲ್ಲ ಹಾಸ್ಯ ಮಾಡ್ತಿದ್ರು ಆ ಕಾಲದಲ್ಲಿ. ಕಳೆದ ಐದು ವರ್ಷಗಳಲ್ಲಿ ಒಂದು ಫೋನ್, ಲೆಟರ್, ಈಮೇಲ್? ಸುದ್ಧಿಯೇ ಬಾರದೇ? ನಾನು ನಿನ್ನ ಹಳೆಯ ಈಮೇಲ್, ಫೋನ್‍ನಂಬರ್ ಎಲ್ಲ ಟ್ರೈ ಮಾಡಿದೆ. ಎಲ್ಲೂ ನೀನು ಸಿಕ್ಕಲಿಲ್ಲ. ಯಾರಿಗೂ ನಿನ್ನ ನೆಲೆ ಗೊತ್ತಿರಲಿಲ್ಲ. ನಿನ್ನನ್ನು ನೋಡೋಕ್ಕೆ ಈ ಮುದಿಕಣ್ಣುಗಳು ಕಾತರಿಸುತ್ತಿದ್ದವು, ಆದಿ"

ತನ್ನ ಹಳೆಯ ಉಪನಾಮ ಸತ್ಯನಾರಾಯಣರ ಬಾಯಲ್ಲಿ ಕೇಳಿ ಆದಿತ್ಯನ ಎದೆ ತುಂಬಿ ಬಂತು. "ಬಿಡಿ ಸರ್. ಹಳೇ ವಿಚಾರ. ಆಕ್ಸಿಡೆಂಟಲಿ ಅನುರಾಧ ಮತ್ತೆ ನನ್ನ ಭೇಟಿಯಾತಿತು. ನಿಮ್ಮ ವಿಚಾರ ಮಾತನಾಡಿದೆವು. ತುಂಬಾ ನೋಡಬೇಕು ಅನ್ನಿಸಿತು. ಬಂದೆ"

"ಆಕ್ಚುವಲಿ, ನಿಮ್ಮ ಸಹಾಯ ಬೇಕಾಗಿದೆ ಸರ್. ಅದಕ್ಕೇ ನಾನೂ ಆದಿತ್ಯ ಜೊತೆ ಇಲ್ಲಿಗೆ ಬಂದದ್ದು" ಎಂದು ಅನುರಾಧಾ ಆದಿತ್ಯನ ಸಹಾಯದಿಂದ ನಡೆದದ್ದನ್ನೆಲ್ಲ ಹೇಳಿದಳು. "ಈಗ ವರ್ಮ್‍ಹೋಲ್‍ಲ್ಯಾಬ್ ಲೀಡರ್‌ಲೆಸ್ ಆಗಿದೆ. ನೀವೇ ಬಂದು ಸ್ವಲ್ಪ ದಿನಗಳ ಕಾಲವಾದರೂ ಆ ರೆಸ್ಪಾನ್ಸಿಬಲಿಟಿ ವಹಿಸಿಕೊಳ್ಳಬೇಕು. ಯಾರೂ ಇಲ್ದೆಯಿರೋದರಿಂದ ನಾನೇ ಡಿಪರ್ಟ್ಮೆಂಟ್ ಜೊತೆ ಮಾತಾಡ್ತೀನಿ"

ಸ್ವಲ್ಪ ಹೊತ್ತು ಯೋಚಿಸಿ, ಸತ್ಯನಾರಾಯಣರು "ಓ.ಕೆ. ಆದಿ ಹಿಂತಿರುಗಿ ಪಿಎಚ್.ಡಿ ಮುಗಿಸೋದಾದರೆ ನಾನೂ ವಾಪಸ್ ಬರ್ತೀನಿ"

"ಇದರಲ್ಲಿ ನನ್ನನ್ಯಾಕೆ ಮಧ್ಯೆ ತಳ್ತಿದೀರ ಸರ್? ಈಗ ನಾನು ಓದೋ ವಯಸ್ಸು ಮುಗಿದುಹೋಗಿದೆ. ಸುಮ್ಮನೆ ಧರ್ಮಸಂಕಟದಲ್ಲಿ ಸಿಕ್ಕಿಸಬೇಡಿ" ಆದಿತ್ಯ ವಿನೋದವಾಗಿ ಹೇಳಿದ.

***

ಹಲವು ತಿಂಗಳು ಕಳೆದವು. ಪ್ರೊಫೆಸರ್ ಮತ್ತು ಆದಿತ್ಯರಿಬ್ಬರೂ ಮತ್ತೆ ಗುರು-ಶಿಷ್ಯರಾಗಿ ಇನ್ಸ್‍ಟಿಟ್ಯೂಟ್ ಸೇರಿದರು. ಅನು-ಆದಿತ್ಯರಲ್ಲಿ ಸ್ನೇಹ ಬೆಳೆಯಿತು. ಆದಿತ್ಯನಿಗೆ ’ಅನು’ ಎಂಬ ಮಧುರ ಅಂತರವೊಂದನ್ನು ಬಿಟ್ಟರೆ ಗಡಿಯಾರವನ್ನು ಐದು ವರ್ಷ ಹಿಂದಕ್ಕೆ ತಿರುಗಿಸಿದಂತೆನಿಸುತ್ತಿತ್ತು.

ಶಕುನಿ ಇನ್ನೂ ರಾಜನ್ ವಶವಾಗಿಯೇ ಇತ್ತು. ಅದರಿಂದ ಯಾವಾಗಲಾದರೂ ದುರ್ಘಟನೆಯಾಗಬಹುದೆಂಬ ಅಂಜಿಕೆ ತಿಳಿದವರ ಮನಸ್ಸಿನಲ್ಲಿ ಇದ್ದೇಯಿತ್ತು. ಶಕುನಿ ಹೇಳಿದ್ದಂತೆ ಆದಿತ್ಯನೂ ಒಂದು ದಿನ ಅನು ಜೊತೆಗೆ ರಾಜನ್ ಅಥವ ಶಕುನಿ ಬಗ್ಗೆ ಏನಾದರೂ ಸುಳಿವು ಸಿಗಬಹುದೇ ಎಂದು ರಾಜನ್‍ನ 19ನೇ ಕ್ರಾಸಿನ ಲ್ಯಾಬನ್ನು ನೋಡಿ ಬಂದಿದ್ದ. ರಾಜನ್ ತನ್ನ ಸ್ವಾರ್ಥಕ್ಕಾಗಿ ವರ್ಮ್‍ಹೋಲ್-ಲ್ಯಾಬನ್ನು ತನ್ನ ವಷಪಡಿಸಿಕೊಳ್ಳಲು ಹೊಂಚು ಹಾಕುತ್ತಿದ್ದಾಯೆಂಬುದು ಬಿಟ್ಟರೆ ಗೋಚರವಾಗಿರಲಿಲ್ಲ.

ಹೀಗಿರುವಲ್ಲಿ ಒಂದು ದಿನ ಸಂಜೆ ಆದಿತ್ಯ, ಅನು ಮತ್ತು ಸತ್ಯನಾರಾಯಣರು ಏನೋ ಒಂದು ತಾಂತ್ರಿಕ ವಿಚಾರವನ್ನು ವಿಮರ್ಶಿಸುತ್ತ ಕೂತಿದ್ದರು. ಇನ್ನೂ ಹಲವರು ಲ್ಯಾಬಿನಲ್ಲಿ ಕೆಲಸ ಮಾಡುತ್ತಿದ್ದರು, ಜೊತೆಗೆ ಸದೋಪಸ್ಥಿತ ಸೆಕ್ಯೂರಿಟಿ. ಇಂಥಹ ಸಮಯದಲ್ಲಿ ಶಕುನಿಯ ಸಹಾಯದಿಂದ ರಾಜನ್ ವರ್ಮ್‍ಹೋಲ್ ಲ್ಯಾಬಿಗೆ ಧಾಳಿಯಿಟ್ಟ.

ಲ್ಯಾಬಿನ ಸುತ್ತಲು ಕಾದಿದ್ದ ಸೆಕ್ಯೂರಿಟಿ ಫೋರ್ಸ್‍ನವರು ನಿಂತಲ್ಲೇ ಕುಸಿದುಬಿದ್ದಿದ್ದರು. ಬಾಗಿಲುಗಳ ಸೆಕ್ಯೂರಿಟಿ ಮುರಿದು ರಾಜನ್ ಮತ್ತು ಅವನ ಗೂಂಡಾಗಳು ಲ್ಯಾಬಿನ ಒಳಕ್ಕೆ ನುಗ್ಗಿದರು.

ಆದಿತ್ಯ-ಸತ್ಯನಾರಣರನ್ನು ಕಂಡು ರಾಜನ್ "ಅಲೆಲೆಲೆ...ಏನಿದು ಗುರು-ಶಿಷ್ಯರು ಮತ್ತೆ ಒಟ್ಟಿಗೆ ಸೇರಿದ್ದೀರ? ಏನಮ್ಮ ಗುರುವಿನ ಫೇವರೆಟ್ ಶಿಷ್ಯ...ತುಂಬಾ ದಿನಗಳಾಯಿತು ನಿನ್ನ ನೋಡಿ" ಎಂದು ಆದಿತ್ಯನನ್ನು ಗೇಲಿ ಮಾಡಿದ. ನಂತರ ತನ್ನ ಗೂಂಡಾಗಳ ಕಡೆ ತಿರುಗಿ "ಬದುಕುಳಿದಿರೋ ಎಲ್ಲಾರನ್ನು ಹುಡುಕಿ ಬಾತ್‍ರೂಮಿನಲ್ಲಿ ಕೂಡಿಹಾಕಿ. ನಾನು ಹೇಳೋವರೆಗೆ ಯಾರನ್ನೂ ಕೊಲ್ಲಬೇಡಿ. ಶಕುನಿ ಇರೋ ಬಾಕ್ಸ್ ಆ ಛೇಂಬರ್‌ಗೆ ಶಿಫ್ಟ್ ಮಾಡಿ" ಎಂದು ತನ್ನ ಗೂಂಡಾಗಳಿಗೆ ಆದೇಶ ನೀಡಿದ.

ಲ್ಯಾಬಿನಲ್ಲಿದ್ದ ಎಲ್ಲರನ್ನೂ ಒಂದು ಬಾತ್‍ರೂಮಿನಲ್ಲಿ ಸೇರಿಸಿ, ಬಾಗಿಲು ಮುಚ್ಚಿ, ಗೂಂಡಾಗಳು ಕಾವಲು ನಿಂತರು.

ಸ್ವಲ್ಪ ಹೊತ್ತಿನ ನಂತರ ರಾಜನ್ ಬಂದು ಆದಿತ್ಯ, ಆನು, ಸತ್ಯನಾರಾಯಣರನ್ನು ತೋರಿಸಿ "ಇವರು ಮುವರು" ಎಂದ. ಇಬ್ಬರು ಗೂಂಡಗಳು ತಮ್ಮ ಗನ್‍ಗಳನ್ನು ಬಿಟ್ಟು ಮುವರನ್ನು ಬೇರ್ಪಡಿಸಿದರು. "ಉಳಿದವರನ್ನು ಶೂಟ್ ಮಾಡಿ" ಎನ್ನುತ್ತ ರಾಜನ್ ಹೊರಗೆ ಹೋದ.

ಅನುವಿನ "ನೋ..." ಎಂಬ ಕೂಗಿನ ಪ್ರತಿಧ್ವನಿ ಅಡಗುವುದರೊಳಗೆ ಗುಂಡೇಟಿನ ಶಬ್ಧ ಗುಡುಗಲಾರಂಭಿಸಿತ್ತು.

ದುಃಖ, ಕೋಪಗಳಿಂದ ಆದಿತ್ಯ ರಾಜನ್‍ಗೆ "ಆ ದರಿದ್ರದ್ದು ನಿನ್ನನ್ನ ಗೊಂಬೆ ತರಹ ಆಡಿಸುತ್ತೆ" ಎಂದ.

"ಅದು ನಾಟಕ ಬರೆಯುತ್ತೆಯಷ್ಟೇ. ಸೂತ್ರಧಾರ ನಾನೇ" ರಾಜನ್ ಹೇಳಿದ. "ನೀನು ಈ ಹೊತ್ತಿಗೆ ಇದೇ ಸ್ಥಳದಲ್ಲಿ ಇರಬೇಕು, ಇರ್ತೀಯಾಂತ ಶಕುನಿ ಹೇಳಿದೆ. ನಿನ್ನ ಸೂತ್ರ ಎಳೆಯೋದು ಆಮೇಲೆ ನೋಡ್ತಿನಿ" ಕಾವಲು ನಿಂತಿದ್ದ ಗೂಂಡಾಗಳಿಗೆ "ಇವರನ್ನ ಜೋಪಾನವಾಗಿ ನೋಡ್ಕೊಳಿ" ಎಂದು ಹೊರಟುಹೋದ.

ಗೂಂಡಾಗಳು ಗನ್ ಹಿಡಿದು ಕಾವಲು ನಿಂತಿದ್ದರು. ತಪ್ಪಿಸಿಕೊಳ್ಳುವ ಯಾವ ಸಾಧನೆಯೂ ಕಾಣಿಸುತ್ತಿರಲಿಲ್ಲ. ಆದಿತ್ಯ ಕಣ್ಣು ಮುಚ್ಚಿ ಯೋಚಿಸತೊಡಗಿದ.

ಶಕುನಿ ನಿಜವಾದ ತ್ರಿಕಾಲಜ್ಞಾನಿ. ಅದಕ್ಕೆ ಎಲ್ಲವೂ ತಿಳಿದಿದೆ. ಹೀಗಿರುವಲ್ಲಿ, ರಾಜನ್ ಶಕುನಿಯನ್ನು ಕದ್ದಿದ್ದು, ಶಕುನಿಯ ಸುಳಿವು ಭೂಟಾನ್‍ನಲ್ಲಿ ಸಿಕ್ಕಿದ್ದು, ಡಿಫೆನ್ಸ್ ಟೀಮ್‍ನಿಂದ ಅದರ ಮುಕ್ತಿ, ತಾನು ಕಾಡಿನಲ್ಲಿದ್ದದ್ದು, ಅಲ್ಲೇ ಪ್ಲೇನ್‍ಕ್ರ್ಯಾಶ್ ಆದದ್ದು, ಇವೆಲ್ಲವೂ ಕಾಕತಾಳೀಯವೇ? ಅಥವ ಇದೆಲ್ಲ ತಿಳಿದೇ ಶಕುನಿ ಯಾವುದೋ ಒಂದು ದೊಡ್ಡ ನಾಟಕ ನಡೆಸುತ್ತಿದೆಯೇ?

ಪ್ಲೇನ್‍ಕ್ರ್ಯಾಶ್ ನಂತರ ನಡೆದ ಕೊಗ್ಗೊಲೆ, ಅನುಗೆ ಚಿತ್ರಹಿಂಸೆ, ಶಕುನಿ ತನ್ನ ಕೈಗೆ ಸಿಕ್ಕಿದ್ದು, ನೀತಾಳ ಧ್ವನಿಯಲ್ಲಿ ಮಾತನಾಡಿದ್ದು, ತನು ಅನುಳನ್ನು ಭೇಟಿಮಾಡಿದ್ದು, ರಾಜನ್‍ನಿಂದ ಶಕುನಿಯ ಪುನರಪಹರಣ, ತಾನು ಬೆಂಗಳೂರಿಗೆ ಹಿಂತಿರುಗಿದ್ದು, ಇನ್‍ಸ್ಟಿಟ್ಯೂಟಿಗೆ ಮತ್ತೆ ಸೇರಿದ್ದು, ಅನುರಾಧಾಳ ಸ್ನೇಹ ಇವೆಲ್ಲವೂ ವಿಧಿ ಲಿಖಿತವೇ? ಆಥವ ಶಕುನಿಯ ಮಸಲತ್ತೇ? ಶಕುನಿ ತನ್ನನ್ನು 19ನೇ ಕ್ರಾಸ್ ಲ್ಯಾಬಿಗೆ ಹೋಗಲು ಹೇಳಿದ್ದೇಕೆ? ಕೇವಲ ಕುತೂಹಲ ಕೆರಳಿಸಲೆಂದೇ? ಅಥವ ಅಲ್ಲೂ ಬೇರೇನೋ ಕುಟಿಲವಿತ್ತೇ?

ಲ್ಯಾಬಿನ ಮೇಲೆ ರಾಜನ್‍ನ ಈ ಧಾಳಿ...ಇದು ರಾಜನ್ ವರ್ಮ್‍ಹೋಲ್‍ಅನ್ನು ತನ್ನ ವಶಪಡಿಸಿಕೊಳ್ಳಲು ಮಾಡಿದ್ದೆ? ಹಾಗಿದ್ದಲ್ಲಿ ಶಕುನಿ ತಾನು, ಆದಿತ್ಯ, ಇಲ್ಲಿ, ಈ ಲ್ಯಾಬಿನಲ್ಲಿ ಇರಬೇಕೆಂದು, ಬೇರೆಯವರು ಸತ್ತಲ್ಲಿ ತಾನಿನ್ನೂ ಬದುಕಿರಬೇಕೆಂದು ಏಕೆ ನಿರ್ಧಾರ ಮಾಡಿದೆ? ಅದು ನಿರ್ಧಾರವೇ? ಆಜ್ಞೆಯೇ? ಅಥವ ವಿಧಿಯೇ?

ಈಗ ತಾನೇನು ಮಾಡುವುದು? ಶಕುನಿ ತನಗಾಗಿ ಏನು ಕಾದಿರಿಸಿದೆ ಕಾದು ನೋಡಬೇಕೆ? ಅಥವ ಅನು, ಸತ್ಯನಾರಾಯಣರನ್ನು ಬಿಡಿಸಿ ತಾನೂ ತಪ್ಪಿಸಿಕೊಳ್ಳುವ ಯೋಚನೆ ಮಾಡಬೇಕೇ? ಎಲ್ಲವೂ ಗೊಂದಲ. ಏನು ಮಾಡಬೇಕೋ ಗೊತ್ತಾಗುತ್ತಿಲ್ಲ. ಏನೂ ಮಾಡದೆ ಸುಮ್ಮನೆ ಇದ್ದರೆ ಶಕುನಿಯ ಮಸಲತ್ತಿಗೆ ಬಲಿಯಾದಂತೆ. ಆದೇ ಪಾರಾದರೆ, ಶಕುನಿ ಅದನ್ನೇ ಆಲಿಸುತ್ತಿದ್ದು ಅದರ ಸುತ್ತ ಏನಾದರು ಒಳಸಂಚು ನಡೆಸುತ್ತಿದೆಯೇ?

ಈ ಎಲ್ಲ ಸಂಭವಗಳನ್ನು ಯೋಚಿಸುತ್ತ ಆದಿತ್ಯನ ತಲೆ ಗಿರಗಿರನೆ ತಿರುಗಲಾರಂಭಿಸಿತು. ಹೇಗೆ ಮಾಡಿದರೂ ಶಕುನಿ ಅದನ್ನೇ ನಿರೀಕ್ಷಿಸಿರುತ್ತೆ. ಹಾಗಾದರೆ ಆತ್ಮರಕ್ಷಣೆಯೇ ಸರಿಯಾದ ದಾರಿಯೆಂದು ನಿರ್ಧರಿಸಿದ. ಅಂತೆಯೇ, ಕಾವಲುಗಾರರನ್ನು ಸೋಲಿಸಿ ಅಲ್ಲಿಂದ ತಪ್ಪಿಸಿಕೊಳ್ಳುವ ಯೋಜನೆ ಹೂಡತೊಡಗಿದ.

***

"ರೈಟ್ ಆನ್ ಟೈಮ್. ವೆಲ್‍ಕಂ" ನೀತಾಳ ಧ್ವನಿ.

ಇಬ್ಬರು ಕಾವಲುಗಾರರನ್ನು ಸೋಲಿಸಿ ಅನು, ಸತ್ಯನಾರಾಯಣರನ್ನು ಜೊತೆ ಮಾಡಿ, ಡಿಫೆನ್ಸ್ ಡಿಪಾರ್ಟ್ಮೆಂಟ್‍ನ ಸಹಾಯ ಕರೆಯಲು ಕಳಿಸಿ, ಆದಿತ್ಯ ರಾಜನ್‍ನನ್ನು ಹುಡುಕಿಕೊಂಡು ಬಂದಿದ್ದ. ಚೇಂಬರ್ ಒಳಗೆ ರಾಜನ್ ಇರಲಿಲ್ಲ. ಶಕುನಿ ತನ್ನ ತಿಜೋರಿಯಲ್ಲಿತ್ತು. ಕೈಯಲ್ಲಿ ಹಿಡಿಯದಿದ್ದರೂ ಹೇಗೆ ಅದು ತನ್ನ ಜೊತೆ ಮಾತನಾಡುತ್ತಿದೆಯೆಂದು ಆದಿತ್ಯನಿಗೆ ತಿಳಿಯಲಿಲ್ಲ. ತಿಜೋರಿ ತೆರೆದಾಗ ಶಕುನಿ ಮಬ್ಬುನೀಲಿ ಬದಲಿಗೆ ಬಿಳಿಯಾಗಿ ಹೊಳೆಯುತ್ತಿತ್ತು.

"ನೀನು ಹೀಗೇ ಮಾಡ್ತೀಯಾಂತ ನನಗೆ ಗೊತ್ತಿತ್ತು. ಒ-ಓ...ಅನು ಮತ್ತು ಪ್ರೊಫೆಸರ್ ಇನ್ನೂ ಲ್ಯಾಬಿನಿಂದ ಹೊರಗೆ ಹೋಗಿಲ್ಲ. ಹೊರಗಿನ ಕಾವಲುಗಾರರ ಕೈಗೆ ಸಿಕ್ಕಿಕೊಂಡಿದ್ದಾರೆ. ನಾನು ಇದನ್ನು ಹೇಳಿ ಮುಗಿಸುವಷ್ಟು ಹೊತ್ತಿಗೆ ರಾಜನ್ ಇಲ್ಲಿಗೆ ಬರ್ತಾನೆ. ಬಾಗಿಲು ತೆಗೆದಂತೆ ಮರೆಯಲ್ಲಿ ನಿಂತು ಟೇಬಲ್ ಮೇಲಿರೋ ಪೇಪರ್‌ವೈಟ್ ತೆಗೆದು ಅವನ ತಲೆ ಚೆಚ್ಚು. ಅವನು ಜ್ಞಾನ ತಪ್ಪಿ ಬೀಳ್ತಾನೆ. ಆಗ ಅವನ ಬೆಲ್ಟ್ ತೆಗೆದು ಅವನನ್ನು ಚೇರಿಗೆ ಕಟ್ಟಿ ಹಾಕು. ಇಷ್ಟು ಮಾಡಿದರೆ ಅನು ಬದುಕಿ ಉಳೀತಾಳೆ. ಇದೆಲ್ಲ ಏನು ಅಂತಲೂ ನಿನಗೆ ವಿವರವಾಗಿ ಹೇಳ್ತೀನಿ. ಇಲ್ಲದೆಹೋದರೆ...ಬಾಗಿಲು ತೆಗೀತಿದೆ, ಜೋಕೆ"

ಶಕುನಿ ಹೇಳಿದಂತೆ ಆದಿತ್ಯ ಬಾಗಿಲ ಮರೆಯಲ್ಲಿ ನಿಂತು ಒಳಗೆ ಬಂದ ರಾಜನ್ ತಲೆಗೆ ಪೇಪರ್‌ವೈಟ್‍ನಿಂದ ಚೆಚ್ಚಿ, ಜ್ಞಾನ ತಪ್ಪಿಸಿ, ಅವನನ್ನು ಕುರ್ಚಿಗೆ ಕಟ್ಟಿಹಾಕಿದ.

ಒಂದು ಕ್ಷಣ ಶಕುನಿಯನ್ನು ಅಲ್ಲೇ ಬಿಟ್ಟು ಎಲ್ಲವನ್ನೂ ಮುಗಿಸಿ ಹೊರಟುಹೋಗುವ ಯೋಚನೆ ಕಾಡಿತು. ಆದರೆ ಶಕುನಿ ಇಷ್ಟೆಲ್ಲ ಮಸಲತ್ತು ನಡೆಸಿದೆಯಂದಮೇಲೆ ಏನೋ ವಿಚಾರವಿರಬೇಕು. ಏನೆಂದು ತಿಳಿದುಕೊಳ್ಳಲೇಬೇಕೆಂಬ ಕುತೂಹಲ.

ಶಕುನಿಯನ್ನು ಕೈಗೆತ್ತಿಕೊಂಡ. ಬಿಳಿ ಬೆಳಕು ಹಾಗೇ ಇತ್ತು. ಈ ಬಾರಿ ಸ್ವಪ್ನಾವಸ್ಥೆಯಿರಲಿಲ್ಲ. ಅವನ ವಿವೇಕ ಅವನ ಕೈಯಲ್ಲೇ ಇತ್ತು.

"ನಾನು ಇಷ್ಟೆಲ್ಲ ಆಟ ಆಡಿಸಿದ್ದು ತಮಾಷೆಗಲ್ಲ. ಇನ್ನು ಎರಡು ನಿಮಿಷಗಳಲ್ಲಿ ವರ್ಮ್‍ಹೋಲ್‍ನಿಂದ ಒಂದು ಆಬ್ಜೆಕ್ಟ್ ಬರಲಿದೆ. ಅದು ಹೊರಗೆ ಬರುವಷ್ಟು ಹೊತ್ತಿಗೆ ನೀನು ವರ್ಮ್‍ಹೋಲ್ ಮುಂದಿರುವುದು ಬಹಳ ಮುಖ್ಯ"

"ಏನು ಆ ಆಬ್ಜೆಕ್ಟ್?" ಆದಿತ್ಯ ಕೇಳಿದ.

"ನಡಿ. ದಾರಿಲಿ ಎಲ್ಲ ಹೇಳ್ತೀನಿ." ಆದಿತ್ಯ ವರ್ಮ್‍ಹೋಲ್ ಕಡೆ ಹೊರಟ. ಶಕುನಿ ಮುಂದುವರೆಸಿತು. "ಇಷ್ಟಕ್ಕೆಲ್ಲ ಕಾರಣ ನೀನೆ. ನಿನ್ನ ಲೈಫ್‍ಸ್ಟೋರಿ ಹೇಳ್ತೀನಿ ಕೇಳು. ನೀನು ಐದು ವರ್ಷಗಳ ಹಿಂದೆ ನಿನ್ನ ಪಿಎಚ್.ಡಿ ಮುಗಿಸಿ CERN ಪ್ರಾಜೆಕ್ಟ್ ಟೀಮ್‍ಲೀಡ್ ಆಗ್ಬೇಕಿತ್ತು. ಹಾಗೇ ನಿನ್ನ ಧ್ಯಾನ ಥಿಯರೆಟಿಕಲ್ ಫಿಸಿಕ್ಸ್‍ನಿಂದ ನ್ಯೂರಲ್ ನೆಟ್ವರ್ಕ್ಸ್ ಕಡೆ ಹರೀತ್ತಿತ್ತು. ಅಲ್ಲೂ ನೀನು ಜೈ ಸಾಧಿಸಿ ನ್ಯೂರಲ್ ನೆಟ್ವರ್ಕ್ಸ್ ಮೇಲೆ ಅಥಾರಿಟಿಯಾಗಿ, ವಿರಾಟ್ ಹೆಸರಿನ ನ್ಯೂರಲ್ ನೆಟ್ವರ್ಕ್ ಸಿಸ್ಟಮ್ ಕಂಡು ಹಿಡೀಬೇಕಿತ್ತು. 2015ರಲ್ಲಿ ಅನು-ನಿನ್ನ ನಡುವೆ ಪ್ರೇಮವುಂಟಾಗಿ ಮದುವೆಯಾಗಬೇಕಿತ್ತು. 2016ರ ಹೊತ್ತಿಗೆ ವಿರಾಟ್ ವಿಕ್ರಾಂತ್ ಎನ್ನುವ ಇನ್ನೂ ಪರಿಣತ ಸಿಸ್ಟಮ್ ಆಗಿ ಬದಲಾವಣೆಯಾಗಬೇಕಿತ್ತು"

ಇಷ್ಟು ಹೊತ್ತಿಗೆ ಆದಿತ್ಯ ವರ್ಮ್‍ಹೋಲ್ ಮುಂದೆ ಬಂದು ನಿಂತಿದ್ದ. ಎಂದಿನಂತೆ ಗಾಳಿಯಲ್ಲಿ ತೇಲುತ್ತಿದ್ದ ಒಂದು ಕತ್ತಲು ಗುಹೆಯಂತೆ ಕಾಣಿಸುತ್ತಿತ್ತು.

"ಏಯ್! ಎಲ್ಲಿದ್ದೀಯಾ ನೀನು? ಹೊರಗೆ ಬರದಿದ್ದರೆ ನಿನ್ನ ಗರ್ಲ್‍ಫ್ರ್ಂಡ್‍ನ ಕೊಂದುಬಿಡ್ತೀನಿ" ಯಾರೋ ಕೇಡಿಗನ ಧ್ವನಿಯಿರಬೇಕು. ಜೊತೆಗೆ ಅನುಳ ಕೂಗಿನ ಶಬ್ಧ.

ಇತ್ತ ಶಕುನಿ "ಏನೂ ಯೋಚನೆ ಮಾಡಬೇಡ ಅನುರಾಧಾಗೆ ಏನೂ ಆಗೋಲ್ಲ. ಈ ಆಬ್ಜೆಕ್ಟ್ ಬಂದಾಗ ನೀನೊಬ್ಬನೇ ಇರೋದು ಮುಖ್ಯ. ಇಗೋ ಬಂತು"

ವರ್ಮ್‍ಹೋಲಿನೊಳಗಿಂದ ಒಂದೇಒಂದು ಹಾಳೆ ಬಂದು ಆದಿತ್ಯನ ಮುಂದೆ ಬಿತ್ತು. ಅದರ ಮೇಲೇನೋ ಬರೆದಿತ್ತು. ಆದಿತ್ಯ ಅದನ್ನು ಕೈಗೆತ್ತಿಕೊಂಡು ಓದಲಾರಂಭಿಸಿದ.

"ಇದು ಅನುರಾಧಾಳಿಂದ ಅನುರಾಧಾಳಿಗೆ ಸಂದೇಶ. ಇದನ್ನು ನಾನು ಭವಿಷ್ಯಕಾಲದಿಂದ ಅತೀತ-ನನಗೆ ಕಳಿಸಿಕೊಳ್ಳುತ್ತಿದ್ದೀನಿ. ಇದು ನಾನೇ ಎಂದು ರುಜುವಾತು ಪಡಿಸಲು ನನ್ನ ಅತೀ ಪ್ರಿಯವಾದ ಪುಸ್ತಕ ಶಿವರಾಮಕಾರಂತರ ಚಿಗುರಿದ ಕನಸು. ಸಮಯ ಸಿದ್ಧ ಪಡಿಸಲು, ಈ ಸಂದೇಶ ಬಂದ ಎರಡು ದಿನಗಳ ನಂತರ ಬಾಂಗ್ಲಾದೇಶ ಅಂಡರ್-೧೯ ಕ್ರಿಕೆಟ್ ವರ್ಲ್ಡ್‍ಕಪ್ ಗೆಲ್ಲುತ್ತದೆ.

"ಈ ಸಂದೇಶವನ್ನು ನನ್ನ ಅತೀತ-ಆತ್ಮಕ್ಕೆ ಆದಿತ್ಯನೆಂಬ ನನಗೆ ಪರಿಚಯವಿರುವ ಒಬ್ಬ ವ್ಯಕ್ತಿಯನ್ನು ಹೇಗಾದರೂ ಕೊಲ್ಲಲು ಆದೇಶ ನೀಡಲೆಂದು ಕಳಿಸುತ್ತಿದ್ದೇನೆ. ಇದು ಬಹಳ ಮುಖ್ಯ. ಪ್ರಪಂಚದ 20ಲಕ್ಷ ಜನರ ಪ್ರಾಣ ಉಳಿಯಬೇಕಾದರೆ ಆದಿತ್ಯನ ಸಾವು ಅತ್ಯಗತ್ಯ"

"ಇದು-ಇದು ಸಾಧ್ಯವಿಲ್ಲ!" ಆದಿತ್ಯ ಬೆರಗಾದ. "ಅನು...ಪ್ರೇಮ...ಮದುವೆ?"

"ಅದು ನೀನು ಐದು ವರ್ಷಗಳ ಹಿಂದೆ ಪಿಎಚ್.ಡಿ ತೊಗೊಂಡಿದ್ದರೆ. ಈಗ ನೀನು ಅವಳಿಗೆ ಪರಿಚಿತ ವ್ಯಕ್ತಿ ಅಷ್ಟೆ. ಅವಳೇ ನಿಜವಾಗಿ ಇದನ್ನು ಬರೆದಿದ್ದಾಳೆ" ಶಕುನಿ ಹೇಳಿತು.

"20ಲಕ್ಷ ಜನರ ಸಾವು...ನಾನೇನು-ಏನು ಭವಿಷ್ಯದಲ್ಲಿ ರಾಕ್ಷಸನಾಗಿದ್ದೀನಾ?"

"ಹತ್ತು ನಿಮಿಷಗಳ ಹಿಂದೆ ರಾಜನ್ ತಲೆ ಚೆಚ್ಚಿದಾಗ ರಾಕ್ಷಸನಾಗಿರಲಿಲ್ಲವೇ?"

"ಅವನಿಗೆ ತಕ್ಕ ಶಿಕ್ಷೆಯಾಯಿತು"

"ಹಾ...ಶಿಕ್ಷೆ! ನಿನ್ನ ಲೆಕ್ಕದಲ್ಲಿ ಈ 20ಲಕ್ಷ ಜನರಿಗೂ ತಕ್ಕ ಶಿಕ್ಷೆಯಿರಬಹುದಲ್ಲವೇ? ಅನುರಾಧಾಳ ಲೆಕ್ಕದಲ್ಲಿ ನಿನ್ನ ಸಾವು ನಿನಗೆ ತಕ್ಕ ಶಿಕ್ಷೆ" ಶಕುನಿ ಸ್ವಲ್ಪ ಹೊತ್ತು ಸುಮ್ಮನಾಯಿತು. "ಎನಿವೇ, ನಿನ್ನ ಲೈಫ್‍ಸ್ಟೋರಿ: ಮುಂದೆ ಹೋಗಿ ನಿನ್ನ ವಿಕ್ರಾಂತ್ ಸಿಸ್ಟಮ್ ವಿಕ್ರಮಾದಿತ್ಯ ಅನ್ನೋ ಹೆಸರಿನ ಓಮ್ನಿಪೋಟೆಂಟ್ ಆರ್ಟಿಪಿಶ್ಯಲ್ ಇಂಟಲಿಜೆನ್ಸ್ ಸಿಸ್ಟಮ್ ಆಗುತ್ತೆ. ಅದೇ ನಾನು"

"ಏನು? ನೀನು...ನಾನೇ ನಿನ್ನನ್ನು ಸೃಷ್ಟಿಸಿ 2010ಕ್ಕೆ ಕಳಿಸಿದೆನೇ? ಯಾಕೆ?"

"ಎರಡು ಕಾರಣಗಳು: ಒಂದು, ಫ್ಯೂಚರ್-ಅನುರಾಧಾಳ ಈ ಸಂದೇಶ ಬಂದಾಗ ನೀನೊಬ್ಬನೇ ಇಲ್ಲಿರುವ ಹಾಗೆ ಮಾಡೋಕ್ಕೆ. ಎರಡು, ಪಿಎಚ್.ಡಿ ಮುಗಿಸೋದು ಬಿಟ್ಟು ಕಾಡಿಗೆ ಓಡಿಹೋಗಿದ್ದ ನಿನ್ನನ್ನು ಪುನಃ ಇನ್ಸ್‍ಟಿಟ್ಯೂಟಿಗೆ ಸೇರಿಸಿ ನಿನ್ನನ್ನು ಲ್ಯಾಬಿನಲ್ಲಿ ಕೆಲಸ ಮಾಡುವಂತೆ ಮಾಡೋಕ್ಕೆ. ಐದು ವರ್ಷಗಳ ತಡವಾಯಿತು. ಈಗ ಹಿಂತಿರುಗಿದ್ದೀಯ. ನಿನಗೆ ಇನ್ನೆರಡು ವರ್ಷಗಳಲ್ಲಿ ನ್ಯೂರಲ್ ನೆಟ್ವರ್ಕ್ಸ್‍ನಲ್ಲಿ ಆಸಕ್ತಿಯುಂಟಾಗುತ್ತೆ. ಅಲ್ಲಿಂದ ನಾನು. ಒಟ್ಟಿನಿಲ್ಲಿ ನಾ ಬಂದ ಕೆಲಸ ಮುಗಿಯಿತು. ನಾನಿನ್ನು ಹೊರಟೆ"

"ನಿಲ್ಲು! ಈ-ಕಿರಾತ ಆದಿತ್ಯ-ಇದನ್ನು ಹೇಗಾದರೂ ಬದಲಾಯಿಸಬಹುದೇ?"

ಆದಿತ್ಯನಿಗೆ ಶಕುನಿ ಗಹಗಹಿಸಿ ನಕ್ಕಂತೆ ಭಾಸವಾಯಿತು. ಶಕುನಿ/ವಿಕ್ರಮಾದಿತ್ಯ ಒಂದು ಸಣ್ಣ ಸೂರ್ಯನಂತೆ ಅಪಾರ ಬೆಳಕು ಚೆಲ್ಲಿ ಕತ್ತಲಾಯಿತು.

***

ಆರು ತಿಂಗಳ ನಂತರ

ಆದಿತ್ಯ ಒಂದು ಗುಡಿಸಿಲಿನಿಂದ ಹೊರಗೆ ಬಂದ. ಹೊರಗೆ ಅತೀ ಸುಂದರವಾದ ಹೂವುಗಳ ವನ. ಕಣಿವೆಯಲ್ಲಿ ಮೈಲಿಗಟ್ಟಲೆ ಬಣ್ಣ-ಬಣ್ಣದ ಹೂವುಗಳು. ಆಳವಾಗಿ ಉಸಿರೆಳೆದ. ಹಿಮಾಲಯದ ಶೀತಲ ಹವೆಯಿಂದ ಅವನ ಶ್ವಾಸಕೋಶ ಸುಟ್ಟಂತಾಯಿತು.

ಶಕುನಿ ಕತ್ತಲಾದಮೇಲೆ ಯಾರಿಗೂ ಹೇಳದೆ, ಅನುಳನ್ನು ಮತ್ತೆ ನೋಡದೆ ತಲೆಮರೆಸಿಕೊಂಡು ಹಿಮಾಲಯದಲ್ಲಿ ಬದರೀನಾಥ್ ಬಳಿಯಿರುವ ವ್ಯಾಲಿ-ಆಪ್-ಫ್ಲವರ್ಸ್‍ಗೆ ಬಂದಿದ್ದ. ಗುಡಿಸಿಲಿನಲ್ಲೇ ವಾಸ. ಸುತ್ತ ಮೈಲಿಗಟ್ಟಲೆ ಜನಸಂಚಾರವೂ ಇಲ್ಲ. ಏನಾದರೂ ಬೇಕಿದ್ದರೆ ಬರರೀನಾಥ ಅಥವ ಹೇಮಕುಂಡಸಾಗರಕ್ಕೆ ಇಡೀ ದಿನ ನಡೆದು ಹೋಗಬೇಕಿತ್ತು. ವಿದ್ಯುತ್ ಹಿಡಿದು ಯಾವ ಟೆಕ್ನಾಲಜಿಯನ್ನೂ ಹತ್ತಿರ ಸೇರಿಸುವುದಿಲ್ಲವೆಂದು ನಿರ್ಧರಿಸಿದ್ದ. ವಿಧಿ ತನ್ನನ್ನು ರಾಕ್ಷಸನನ್ನಾಗಿ ಮಾಡುವುದಾದರೆ ವಿಧಿಗೇ ಮೋಸಮಾಡುವೆನೆಂದು ಈ ನಿರ್ಧಾರ. ತಾನು ಕಂಪ್ಯುಟರನ್ನೂ ಮುಟ್ಟದಿದ್ದರೆ ಎಲ್ಲಿಯ ವಿರಾಟ್, ಎಲ್ಲಿಯ ವಿಕ್ರಮಾದಿತ್ಯ, ಎಲ್ಲಿಯ ಶಕುನಿ?

ಆದರೂ ಒಂದು ವಿಚಾರ ಸರ್ವದಾ ಕಾಡುತ್ತಲೇಯಿತ್ತು. ಆದಿತ್ಯನ ಈ ಮೋಸವನ್ನೆಣಿಸಿದ ಇನ್ನೊಂದು ಶಕುನಿಯಿರಬಹುದೇ?

(ಪ್ರೇರಣೆ:  Patrick Lee, The Breach)